ಗೋಮಾ:ಮಧ್ಯ ಆಫ್ರಿಕಾ ಖಂಡದಲ್ಲಿರುವ ಪೂರ್ವ ಕಾಂಗೋದ ಗೋಮಾ ನಗರ ಸಮೀಪವಿರುವ ಮೌಂಟ್ ನೈರಾಗೊಂಗೊದಲ್ಲಿ ಉಂಟಾಗಿರುವ ಭೀಕರ ಜ್ವಾಲಾಮುಖಿ ಸ್ಫೋಟದಿಂದ ಸುಮಾರು 15 ಜನರು ಪ್ರಾಣ ಕಳೆದುಕೊಂಡಿದ್ದು, 500 ಅಧಿಕ ಮನೆಗಳು ನಾಶವಾಗಿವೆ.
ಕಳೆದ ಶನಿವಾರ ರಾತ್ರಿ ಮೌಂಟ್ ನೈರಾಗೊಂಗೊದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಲಾವಾ ಹರಿಯುವಿಕೆಯಿಂದ ತಪ್ಪಿಸಿಕೊಳ್ಳಲು ಸುಮಾರು 5 ಸಾವಿರದಷ್ಟು ಜನರು ಸ್ಥಳೀಯ ರುವಾಂಡಾಗೆ ಪಲಾಯನ ಮಾಡಿದ್ದಾರೆ. 25 ಸಾವಿರದಷ್ಟು ಜನರು ಸಾಕೆ ಎಂಬಲ್ಲಿ ಆಶ್ರಯ ಪಡೆದಿದ್ದಾರೆ ಎಂದು ವಿಶ್ವಸಂಸ್ಥೆಯ ಮಕ್ಕಳ ಸಂಸ್ಥೆ ಯುನಿಸೆಫ್ ಮಾಹಿತಿ ನೀಡಿದೆ.
ಇದನ್ನೂಓದಿ: Watch- ಕಾಂಗೋದಲ್ಲಿ ಜ್ವಾಲಾಮುಖಿ ಸ್ಫೋಟ: ಮನೆ-ಮಠ ತೊರೆದ ಜನರು
ಸ್ಥಳೀಯರ ಮಾಹಿತಿ ಪ್ರಕಾರ, ಬುಗಾಂಬ ಒಂದರಲ್ಲೇ ಸುಮಾರು 10ರಷ್ಟು ಮಂದಿ ಮೃತಪಟ್ಟಿದ್ದಾರೆ. ಈ ಬಗ್ಗೆ ನಿಖರವಾದ ಮಾಹಿತಿ ಸದ್ಯದಲ್ಲೇ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜ್ವಾಲಾಮುಖಿ ಸ್ಫೋಟಗೊಂಡಿರುವ ಪ್ರದೇಶದ ಸಮೀಪದಲ್ಲಿದ್ದ ಅಲೈನ್ ಬಿಚಿಕ್ವೆಬೊ ಎಂಬಾಕೆ ತನ್ನ ಮಗುವಿನೊಂದಿಗೆ ಓಡಿ ಹೋಗಿ ಲಾವಾ ರಸದಿಂದ ತಮ್ಮ ಪ್ರಾಣ ಕಾಪಾಡಿಕೊಂಡಿದ್ದಾಳೆ. ಆದರೆ, ಆಕೆಯ ಅಪ್ಪ, ಅಮ್ಮನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.
ಘಟನೆಯ ಬಳಿಕ ಭಾನುವಾರ 170 ಕ್ಕೂ ಹೆಚ್ಚು ಮಕ್ಕಳು ಕಾಣೆಯಾಗಿದ್ದಾರೆ. ಯುನಿಸೆಫ್ ಅಧಿಕಾರಿಗಳು ಮಕ್ಕಳ ರಕ್ಷಣೆಯಲ್ಲಿ ತೊಡಗಿದ್ದಾರೆ ಎಂದು ತಿಳಿದು ಬಂದಿದೆ. ಕೊನೆಯ ಬಾರಿಗೆ 2002 ರಲ್ಲಿ ಇದೇ ರೀತಿ ಗೋಮಾದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿತ್ತು. ಆಗ, ನೂರಾರು ಜನರು ಪ್ರಾಣ ಕಳೆದುಕೊಂಡಿದ್ದರು ಮತ್ತು ಲಕ್ಷಕ್ಕೂ ಅಧಿಕ ಜನರು ನಿರಾಶ್ರಿತರಾಗಿದ್ದರು.