ಬುರ್ಕಿನಾ ಫಾಸೊ: ಇಸ್ಲಾಮಿಕ್ ಉಗ್ರಗಾಮಿಗಳು ಕಳೆದ ವಾರ ಉತ್ತರ ಬುರ್ಕಿನಾ ಫಾಸೊದಲ್ಲಿ ನಡೆಸಿದ ಭಯಾನಕ ದಾಳಿಯಲ್ಲಿ ಒಟ್ಟು 41 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ದೇಶದ ಮಿಲಿಟರಿಗೆ ಸಹಾಯ ಮಾಡುವ ಸ್ವಯಂಸೇವಕ ಗುಂಪಿನ ಪ್ರಮುಖ ನಾಯಕ ಕೂಡ ಮೃತಪಟ್ಟಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಗುರುವಾರ ಲೊರೌಮ್ ಪ್ರಾಂತ್ಯದ ಒಳಗೆ ನುಗ್ಗಿದ ಉಗ್ರರು, ಬೆಂಗಾವಲು ಪಡೆಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದರು. ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ವಕ್ತಾರ ಅಲ್ಕಾಸ್ಸೌಮ್ ಮೈಗಾ ಎರಡು ದಿನಗಳ ಶೋಕಾಚರಣೆ ಘೋಷಿಸಿದ್ದರು.
ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ ಬುರ್ಕಿನಾ ಫಾಸೊದ ಅಧ್ಯಕ್ಷ ರೋಚ್ ಮಾರ್ಕ್ ಕ್ರಿಶ್ಚಿಯನ್ ಕಬೋರ್, 'ಸೌಮೈಲಾ ಗಣಮೆ, ಲಾಡ್ಜಿ ಯೋರೋ ಸೇರಿದಂತೆ ಅನೇಕರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಶತ್ರುಗಳ ವಿರುದ್ಧ ಹೋರಾಡಲು ನಮಗೆ ಇದು ಮಾದರಿಯಾಗಿರಬೇಕು' ಎಂದು ಹೇಳಿದ್ದಾರೆ.
'ಬುರ್ಕಿನಾ ಫಾಸೊದ ಪ್ರಮುಖ ಸ್ವಯಂಸೇವಕ ನಾಯಕನ ಸಾವು ಆತಂಕವನ್ನು ಸೃಷ್ಟಿಸಿದೆ' ಎಂದು ಈವೆಂಟ್ ಡೇಟಾ ಪ್ರಾಜೆಕ್ಟ್‌ನ ಹಿರಿಯ ಸಂಶೋಧಕ ಹೆನಿ ನ್ಸೈಬಿಯಾ ಹೇಳಿದ್ದಾರೆ.
ಪಶ್ಚಿಮ ಆಫ್ರಿಕಾದ ರಾಷ್ಟ್ರದಲ್ಲಿ ಅಲ್-ಖೈದಾ ಮತ್ತು ಇಸ್ಲಾಮಿಕ್ ಸ್ಟೇಟ್‌ಗೆ ಸಂಬಂಧಿಸಿದ ದಾಳಿಗಳು ಹೆಚ್ಚಾಗುತ್ತಿದ್ದಂತೆ ಹಿಂಸಾಚಾರವು ಉಲ್ಬಣಗೊಳ್ಳುತ್ತಿದೆ. ದೀರ್ಘಕಾಲದಿಂದ ನಡೆಯುತ್ತಿರುವ ಗುಂಪುಗಳ ಹಿಂಸಾಚಾರದಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ.