ಅಹ್ಮದ್ನಗರ:ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ನಾಳೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೇಳಿದ್ದ ಹಿರಿಯ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ತಮ್ಮ ನಿರ್ಧಾರ ಹಿಂಪಡೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ನಾಳೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಘೋಷಣೆ ಮಾಡಿದ್ದರು. ಆದರೆ ಇದೀಗ ಅದನ್ನ ಹಿಂಪಡೆದುಕೊಳ್ಳುವುದಾಗಿ ಹೇಳಿದ್ದಾರೆ.
ಅಣ್ಣಾ ಹಜಾರೆ ಹೇಳಿದ್ದೇನು!?:ಕಳೆದ ಹಲವು ವರ್ಷಗಳಿಂದ ವಿವಿಧ ವಿಷಯಗಳನ್ನಿಟ್ಟುಕೊಂಡು ನಾನು ಆಂದೋಲನ ಮಾಡುತ್ತಿದ್ದೇನೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಕ್ರೈಂ ಅಲ್ಲ. ಕಳೆದ ಮೂರು ವರ್ಷಗಳಿಂದ ರೈತರ ಸಮಸ್ಯೆಗಳ ಬಗ್ಗೆ ನಾನು ಹೋರಾಟ ನಡೆಸಿದ್ದೇನೆ. ಸರಿಯಾದ ಬೆಲೆ ಸಿಗದ ಕಾರಣ ಹಲವು ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ನಾನು ಕೇಂದ್ರಕ್ಕೆ ಪತ್ರ ಸಹ ಬರೆದಿದ್ದೇನೆ.