ಧಾರ್ಮಿಕವಾಗಿ ವಿವಾದಕ್ಕೆ ಕಾರಣವಾದ 'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಪಶ್ಚಿಮ ಬಂಗಾಳದಲ್ಲಿ ವಿರೋಧ ವ್ಯಕ್ತವಾಗಿದೆ. ಟ್ರೇಲರ್ ಬಿಡುಗಡೆಯಾದಾಗಿನಿಂದಲೂ ವಿವಾದಗಳಿಂದ ಸುತ್ತುವರಿದಿರುವ ಚಿತ್ರವು ಹಲವಾರು ರಾಜ್ಯಗಳಲ್ಲಿ ತೀವ್ರ ಪ್ರತಿಭಟನೆ ಎದುರಿಸುತ್ತಿದೆ. ಇದೀಗ ಪಶ್ಚಿಮ ಬಂಗಾಳದಲ್ಲೂ ಈ ಚಿತ್ರ ಪ್ರದರ್ಶನ ಕಾಣದಂತೆ ತಡೆಯೊಡ್ಡಲಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಈ ನಿರ್ಧಾರ ಪ್ರಕಟಿಸಿದ್ದಾರೆ. ರಾಜ್ಯದಲ್ಲಿ ದಿ ಕೇರಳ ಸ್ಟೋರಿ ಪ್ರದರ್ಶನ ಕಾಣುತ್ತಿರುವ ಥಿಯೇಟರ್ನಿಂದ ಚಿತ್ರವನ್ನು ತೆಗೆದುಹಾಕುವಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಿದ್ದಾರೆ.
"ಬಂಗಾಳದಲ್ಲಿ ಶಾಂತಿ ಕಾಪಾಡಲು ಮತ್ತು ದ್ವೇಷದ ಕಿಚ್ಚು ಹರಡದಂತೆ ಹಾಗೂ ಹಿಂಸಾಚಾರದ ಯಾವುದೇ ಘಟನೆ ನಡೆಯದಂತೆ ತಪ್ಪಿಸಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದಕ್ಕೂ ಮೊದಲು ಬಿಜೆಪಿ ಪಕ್ಷದವರು ಈ ಸಿನಿಮಾ ಪ್ರದರ್ಶನಕ್ಕೆ ಧನ ಸಹಾಯ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಈಗಾಗಲೇ ಕೆಲವು ರಾಜಕೀಯ ವ್ಯಕ್ತಿಗಳು, ಮುಸ್ಲಿಂ ಸಂಘಟನೆಗಳು ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕೆಲವೆಡೆ ಪ್ರತಿಭಟನೆಗಳು ನಡೆದಿವೆ. ಇದೀಗ ಪಶ್ಚಿಮ ಬಂಗಾಳದಲ್ಲೂ ಚಿತ್ರ ನಿಷೇಧಿಸಲಾಗಿದೆ.
ತಮಿಳುನಾಡಿನಲ್ಲೂ ಸಿನಿಮಾ ಪ್ರದರ್ಶನ ರದ್ದು: ವಿವಾದ ಮತ್ತು ಪ್ರತಿಭಟನೆಗಳ ನಡುವೆಯೇ ಮೇ 5 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 'ದಿ ಕೇರಳ ಸ್ಟೋರಿ' ಚಿತ್ರದ ಪ್ರದರ್ಶನವನ್ನು ತಮಿಳುನಾಡಿನಲ್ಲಿಯೂ ಸ್ಥಗಿತಗೊಳಿಸಲಾಗಿದೆ. ಸಿನಿಮಾದ ಕುರಿತಾದ ವಿಮರ್ಶೆ, ಕಳಪೆ ಬಾಕ್ಸ್ ಆಫೀಸ್ ಕಲೆಕ್ಷನ್ ಮತ್ತು ಕಾವೇರಿದ ಪ್ರತಿಭಟನೆಗಳ ನಡುವೆ ತಮಿಳುನಾಡಿನ ಚಿತ್ರಮಂದಿರಗಳಲ್ಲಿ ನಿನ್ನೆಯಿಂದ (ಮೇ 7 ) ರಿಂದ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ. ಏಪ್ರಿಲ್ 6 ರಂದು ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಚೆನ್ನೈನಲ್ಲಿ ಚಿತ್ರದ ಬಿಡುಗಡೆಯನ್ನ ವಿರೋಧಿಸಿ ಪ್ರತಿಭಟನೆ ನಡೆಸಿತ್ತು.