ದಿ ತಾಷ್ಕೆಂಟ್ ಫೈಲ್ಸ್, ದಿ ಕಾಶ್ಮೀರ್ ಫೈಲ್ಸ್, ದಿ ವ್ಯಾಕ್ಸಿನ್ ವಾರ್ನಂತಹ ಸಿನಿಮಾಗಳಿಗೆ ಹೆಸರುವಾಸಿಯಾದ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು ತಮ್ಮ ಮುಂದಿನ ಚಿತ್ರವನ್ನು ಘೋಷಿಸಿದ್ದಾರೆ. ತಮ್ಮ ಮಹತ್ವಾಕಾಂಕ್ಷೆಯ 'ಪರ್ವ' ವನ್ನು ಇಂದು ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.
'ಪರ್ವ' ಕಾದಂಬರಿಗೆ ಸಿನಿಮಾ ಸ್ಪರ್ಶ: ಸಿನಿಮಾ ಎಸ್.ಎಲ್ ಭೈರಪ್ಪ ಅವರ 'ಪರ್ವ' ಕಾದಂಬರಿ ಆಧರಿಸಿದ್ದು, ಮೂರು ಭಾಗಗಳಲ್ಲಿ ಮೂಡಿ ಬರಲಿದೆ. ಬಾಲಿವುಡ್ನ ಖ್ಯಾತ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಅವರು, ಮೂರು ಭಾಗಗಳಲ್ಲಿ ಮೂಡಿ ಬರಲಿರುವ ಸಿನಿಮಾವನ್ನು ಇಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ. ವಿವೇಕ್ ರಂಜನ್ ಅಗ್ನಿಹೋತ್ರಿ ಅವರ ಪತ್ನಿ, ನಟಿ, ನಿರ್ಮಾಪಕಿ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. 'ಪರ್ವ' ಕಥೆಯನ್ನು ನಿರ್ದೇಶಕ ಪ್ರಕಾಶ್ ಬೆಳವಾಡಿ ಹಾಗೂ ಮೂಲ ಕಾದಂಬರಿಯ ಲೇಖಕ ಎಸ್.ಎಲ್ ಭೈರಪ್ಪ ಸೇರಿ ಬರೆಯಲಿದ್ದಾರೆ.
ಪರ್ವ ಫಸ್ಟ್ ಲುಕ್ ಅನಾವರಣ: ಪರ್ವ ಸಿನಿಮಾ ಎಸ್.ಎಲ್ ಭೈರಪ್ಪ ಅವರ ಕಾದಂಬರಿಯ ರೂಪಾಂತರ. ಸಂಸ್ಕೃತ ಮಹಾಕಾವ್ಯ 'ಮಹಾಭಾರತ' ಬಗೆಗಿನ ಕುರಿತಾದ ಕಾದಂಬರಿ. ಪ್ರಮುಖ ಪಾತ್ರಗಳ ಆಂತರಿಕ ಆಲೋಚನೆಗಳು ಮತ್ತು ದೃಷ್ಟಿಕೋನಗಳ ಸುತ್ತ ಕಥೆ ಸಾಗಿದೆ. ಎಸ್.ಎಲ್ ಭೈರಪ್ಪ ಅವರ ಬರಹ 'ಆಧುನಿಕ ಕ್ಲಾಸಿಕ್' ಎಂದು ಗುರುತಿಸಲ್ಪಟ್ಟಿದೆ. ವ್ಯಾಪಕ ಮೆಚ್ಚುಗೆಯನ್ನೂ ಸ್ವೀಕರಿಸಿದೆ. ತಮ್ಮ ಹೊಸ ಸಿನಿಮಾ ಘೋಷಿಸಿದ ನಿರ್ದೇಶಕರು, ಚಿತ್ರದ ಫಸ್ಟ್ ಲುಕ್ ಅನ್ನೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ನರ್ಗೀಸ್ ದತ್' ಪ್ರಶಸ್ತಿ..ವಿವೇಕ್ ರಂಜನ್ ಅಗ್ನಿಹೋತ್ರಿ ಅವರಿಗೆ ಇತ್ತೀಚೆಗಷ್ಟೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅಕ್ಟೋಬರ್ 17 (ಮಂಗಳವಾರ) ರಂದು ನವದೆಹಲಿಯಲ್ಲಿ ನಡೆದ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ದಿ ಕಾಶ್ಮೀರ ಫೈಲ್ಸ್ ಸಿನಿಮಾ ರಾಷ್ಟ್ರೀಯ ಏಕೀಕರಣ ವಿಭಾಗದಲ್ಲಿ 'ನರ್ಗೀಸ್ ದತ್' ಪ್ರಶಸ್ತಿಯನ್ನು ಪಡೆದುಕೊಂಡಿದೆ.