ವಿಚಿತ್ರ ಶೈಲಿಯ ಉಡುಗೆಯನ್ನು ಧರಿಸಿ ನೋಡುಗರನ್ನು ಮುಜುಗರಕ್ಕೊಳಗಾಗುವಂತೆ ಮಾಡುವುದರಲ್ಲಿ ಸೋಷಿಯಲ್ ಮೀಡಿಯಾ ಸೆನ್ಸೇಷನ್ ಉರ್ಫಿ ಜಾವೇದ್ ಒಬ್ಬರು. ಇವರು ತಮ್ಮ ವಿಲಕ್ಷಣ ಫ್ಯಾಷನ್ ಸೆನ್ಸ್‌ಗೆ ಹೆಸರುವಾಸಿ. ಬಿಗ್ ಬಾಸ್ ಮೂಲಕ ಜನಪ್ರಿಯರಾದ ಉರ್ಫಿ ತಾವು ತೊಡುವ ಬಟ್ಟೆಯಿಂದಲೇ ಸದ್ದು ಮಾಡುತ್ತಿರುತ್ತಾರೆ. ವಿಚಿತ್ರ ಫ್ಯಾಷನ್ನಿಂದ ಅನೇಕ ಬಾರಿ ಟ್ರೋಲ್ಗೂ ಒಳಗಾಗಿದ್ದಾರೆ. ಅಷ್ಟೇ ಯಾಕೆ, ಈಕೆ ತಿಂಗಳ ಸಂಪಾದನೆಯಲ್ಲಿ ಅನೇಕ ಬಾಲಿವುಡ್ ನಟಿಯರನ್ನು ಕೂಡ ಹಿಂದಿಕ್ಕಿದ್ದಾರೆ.
ಇದೀಗ ಉರ್ಫಿಯ ಡಿಫರೆಂಟ್ ಡ್ರೆಸ್ ಕಂಡ ಹಿರಿಯ ವ್ಯಕ್ತಿಯೊಬ್ಬರು, ಆಕೆಯನ್ನು ಬಹಿರಂಗವಾಗಿ ಟೀಕಿಸಿರುವ ಘಟನೆ ನಡೆದಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರ ಜೊತೆ ಉರ್ಫಿ ಜಗಳವಾಡಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಸೃಷ್ಟಿಸಿದೆ. ಉರ್ಫಿಯ ಟ್ಯಾನ್ಸ್ಫರೆಂಟ್ ದಿರಿಸನ್ನು ಕಂಡು ಮುಜುಗರಕ್ಕೊಳಗಾದ ವ್ಯಕ್ತಿ ಆಕೆಯನ್ನು ಟೀಕಿಸಿದ್ದಾರೆ. ತಕ್ಷಣವೇ ಉರ್ಫಿ ಹಿಂದಿರುಗಿ ಆ ವ್ಯಕ್ತಿಗೆ ಸಮರ್ಪಕ ಉತ್ತರ ನೀಡಿದ್ದು, ನಟಿ ಮತ್ತೊಮ್ಮೆ ಟ್ರೋಲ್ ಆಗಲು ಇದು ಕಾರಣವಾಗಿದೆ.
ಪಾಪರಾಜಿಗಳು ಇನ್ಸ್ಟಾದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಉರ್ಫಿ ಜಾವೇದ್ ಗ್ರೀನ್ ಬ್ಯಾಕ್ಲೆಸ್ ದಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೂದಲನ್ನು ಪಿಂಕ್ ಬಣ್ಣಕ್ಕೆ ಬದಲಾಯಿಸಿದ್ದು, ಮೇಲಕ್ಕೆ ಎತ್ತಿ ಕಟ್ಟಿದ್ದಾರೆ. ಆದರೆ ಆಕೆಯ ಡ್ರೆಸ್ ಹಿರಿಯ ವ್ಯಕ್ತಿಯೊಬ್ಬರಿಗೆ ಇರಿಸುಮುರಿಸು ಉಂಟು ಮಾಡಿದೆ. ಇದಕ್ಕಾಗಿ ಉರ್ಫಿ ಜಾವೇದ್ ಅನ್ನು ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. "ಭಾರತದಲ್ಲಿ ಇಂತಹ ಬಟ್ಟೆಗಳನ್ನು ಅನುಮತಿಸಲಾಗುವುದಿಲ್ಲ. ನೀವು ಭಾರತದ ಹೆಸರನ್ನು ಹಾಳು ಮಾಡುತ್ತಿದ್ದೀರಿ" ಎಂದು ಟೀಕಿಸಿದ್ದಾರೆ.