ಯಶಸ್ವಿ ಸಿನಿಮಾಗಳ ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ಅವರು ದಶಕಗಳ ಇತಿಹಾಸವಿರುವ ದೇಸಿ ಕ್ರೀಡೆ ಕಂಬಳ ಬಗ್ಗೆ ಸಿನಿಮಾ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಸಿನಿಮಾಗೆ ವೀರ ಕಂಬಳ ಅಂತಾ ಟೈಟಲ್ ಇಟ್ಟು ವರ್ಷಗಳ ಕಾಲ ಅಧ್ಯಯನ ಮಾಡಿ ಕಳೆದ ಎರಡು ವರ್ಷಗಳಿಂದ ಮಂಗಳೂರಿನಲ್ಲಿ ಬೀಡು ಬಿಟ್ಟು ಬಹುತೇಕ ಚಿತ್ರೀಕರಣ ಮುಗಿಸಿ ತೆರೆಗೆ ತರೋದಕ್ಕೆ ಸಜ್ಜಾಗಿದ್ದಾರೆ. ಈ ವಿಚಾರವಾಗಿ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ನಿರ್ದೇಶಕ ಎಸ್.ವಿ ರಾಜೇಂದ್ರಸಿಂಗ್ ಬಾಬು ನಿರ್ದೇಶಕ ಎಸ್. ವಿ ರಾಜೇಂದ್ರಸಿಂಗ್ ಬಾಬು ಮಾತನಾಡಿ, ಭಾರತ ಚಿತ್ರರಂಗದಲ್ಲಿ ತುಳುನಾಡಿನ ಅಪ್ಪಟ ದೇಸಿ ಕ್ರೀಡೆಯಾಗಿರುವ ಕಂಬಳ ಬಗ್ಗೆ ಸಿನಿಮಾ ಬಂದಿಲ್ಲ. ಹೀಗಾಗಿ, ಗ್ರಾಮೀಣ ಕ್ರೀಡೆ ಬಗ್ಗೆ ಸಿನಿಮಾ ಮಾಡಬೇಕು ಅಂದುಕೊಂಡು ಮೊದಲು ಕಂಬಳದ ಬಗ್ಗೆ ಚಿಕ್ಕ ಪುಸ್ತಕ ಓದಿದ್ದೆ. ಮಂಗಳೂರಿನವರಾದ ನಿರ್ದೇಶಕ, ಬರಹಗಾರ ವಿಜಯ್ ಕುಮಾರ್ ಕೊಡಿಯಾಲ್‌ಬೈಲ್ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಚಿತ್ರೀಕರಣ ವೇಳೆ ಶೂಟಿಂಗ್ ಸೆಟ್ಗೆ 400 ಜನರು ಬರುತ್ತಿದ್ದರು. 500ಕ್ಕೂ ಹೆಚ್ಚು ಸಹ ಕಲಾವಿದರು ಇರುತ್ತಿದ್ದರು. 20 ಜೋಡಿ ಕೋಣಗಳು ಇದ್ದು, ಬಹಳ ಉತ್ಸಾಹದಾಯಕವಾಗಿದ್ದವು ಎಂದು ತಿಳಿಸಿದರು.
ಇದರಲ್ಲಿ ಅಂಡರ್ ವರ್ಲ್ಡ್ ಕಥೆಯಿದೆ. ಆ ಪಾತ್ರಕ್ಕೆ ಆದಿತ್ಯ ಒಂದು ಪಾತ್ರ ಮಾಡಿದ್ದಾರೆ. ಉಸೇನ್ಬೋಲ್ಟ್ಗೆ ಹೋಲಿಸಿರುವ ರಿಯಲ್ ಕಂಬಳ ಪಟು ಶ್ರೀನಿವಾಸ್ ಗೌಡ ಹಾಗೂ ಮತ್ತೋರ್ವ ತುಳು ನಟ ಸ್ವರಾಜ್ ಶೆಟ್ಟಿ ಚಿತ್ರದ ನಾಯಕರಾಗಿ ಅಭಿನಯಿಸಿದ್ದಾರೆ. ಪ್ರಕಾಶ್ ರೈ ಕೂಡ ಒಂದು ವಿಶೇಷ ಪಾತ್ರ ಮಾಡುತ್ತಿದ್ದಾರೆ. ಅವರ ಚಿತ್ರೀಕರಣ ಮುಗಿಸಿದ್ರೆ ವೀರ ಕಂಬಳ ಸಿನಿಮಾವನ್ನು ಕನ್ನಡ, ತುಳು, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಿಗೆ ಡಬ್ ಮಾಡಿ ವಿಶ್ವಾದ್ಯಂತ ಈ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತದೆ. ಇನ್ನು ದುಬೈ ಹಾಗೂ ಲಂಡನ್ನಲ್ಲಿ ಮೊದಲ ಪ್ರೀಮಿಯರ್ ಶೋ ಮಾಡಲು ಮಾತುಕತೆ ಆಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಮೆಟ್ರೋದಲ್ಲಿ ಬಂದು 'ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ' ಸಿನಿಮಾ ನೋಡಿದ ಸಚಿವ!
ಚಿತ್ರದ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ರಾಧಿಕಾ ಚೇತನ್ ಅಭಿನಯಿಸಿದ್ದಾರೆ. ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಆರ್.ಗಿರಿ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ. ಶ್ರೀನಿವಾಸ್ ಪಿ ಬಾಬು ಅವರ ಸಂಕಲನವಿದೆ. ಮಂಗಳೂರಿನವರಾದ ಅರುಣ್ ರೈ ತೋಡಾರ್ ಈ ಸಿನಿಮಾವನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.