ಸ್ಯಾಂಡಲ್ವುಡ್ನ 'ಸಿಂಹಪ್ರಿಯಾ'(ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ) ಜೋಡಿಯ ವಿವಾಹ ದಿನಾಂಕ ಹೊರಬಿದ್ದಿದೆ. ಇತ್ತೀಚಿಗಷ್ಟೇ ಇಬ್ಬರು ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 'ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು' ಎಂದು ಹುಲಿ ಕೈಯಲ್ಲಿ ಮಲಗಿರುವ ಮಗುವಿನ ಫೋಟೋ ಹಂಚಿಕೊಂಡು ಹರಿಪ್ರಿಯ, ವಸಿಷ್ಠ ಸಿಂಹ ಅವರನ್ನು ಪ್ರೀತಿಸುತ್ತಿರುವ ಬಗ್ಗೆ ಡಿಸೆಂಬರ್ 3ರಂದು ವಿಭಿನ್ನವಾಗಿಯೇ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ರೀತಿಯಲ್ಲಿ ವಸಿಷ್ಠ ಸಿಂಹ ಅವರು, 'ಎಂದೂ ನಿನ್ನ ನೆರಳಾಗಿ ಕಾಯುವೆ ನಾನು' ಎಂದು ಟ್ವೀಟ್ ಮಾಡಿದ್ದರು.
ನಂತರದ ಕೆಲದಿನಗಳಲ್ಲಿ ನಟ ಮತ್ತು ನಟಿ ತಮ್ಮ ಟ್ವಿಟರ್ ಖಾತೆಯಲ್ಲಿ ನಿಶ್ಚಿತಾರ್ಥದ ಫೋಟೋ ಹಂಚಿಕೊಂಡಿದ್ದರು. ಆದರೆ ಮದುವೆಯ ದಿನಾಂಕ ಬಹಿರಂಗವಾಗಿರಲಿಲ್ಲ. ಅಲ್ಲದೇ ಮದುವೆ ದಿನಾಂಕದ ಬಗ್ಗೆ ಬಹಳಷ್ಟು ಊಹಾಪೋಹಗಳು ಓಡಾಡುತ್ತಿದ್ದವು. ಇದಕ್ಕೀಗ ತೆರೆಬಿದ್ದಿದೆ.
ಮೈಸೂರು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟರ್ ಖಾತೆಯಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ಮದುವೆ ದಿನಾಂಕದ ಬಗ್ಗೆ ಮಾಹಿತಿ ನೀಡಿದ್ದಾರೆ. 'ಖ್ಯಾತ ಚಲನಚಿತ್ರ ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಅವರ ವಿವಾಹ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇದೇ ತಿಂಗಳ 26 ರಂದು ನಡೆಯಲಿದೆ' ಎಂದು ಅವರು ತಿಳಿಸಿದ್ದಾರೆ.
ನಿಶ್ಚಿತಾರ್ಥಕ್ಕೂ ಮೊದಲು ದುಬೈ ಪ್ರಯಾಣ:ಕಂಚಿನ ಕಂಠದ ನಟ ವಸಿಷ್ಠ ಸಿಂಹ ಮತ್ತು ನೀರ್ ದೋಸೆ ಬೆಡಗಿ ಹರಿಪ್ರಿಯಾ ನಡುವೆ ಪ್ರೇಮಕಥೆ ವಿಶಿಷ್ಠವಾಗಿಯೇ ಆರಂಭವಾಗಿತ್ತು. ದುಬೈ ಪ್ರವಾಸ ಮುಗಿಸಿಕೊಂಡು ಇಬ್ಬರೂ ಜೊತೆಯಲ್ಲಿ ಬಂದಿದ್ದರು. ಕೈ ಕೈ ಹಿಡಿದು ಕ್ಯಾಮರಾ ಕಣ್ಣಿನಲ್ಲಿ ಸೆರೆಯಾದ ಇಬ್ಬರು ತಾವು ಲವರ್ಸ್ ಅಂತಾ ಸುಳಿವು ನೀಡಿದ್ದರು. ನಂತರ ಕೆಲವು ದಿನಗಳಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆ ಡಾಲರ್ಸ್ ಕಾಲೋನಿಯಲ್ಲಿರುವ ಹರಿಪ್ರಿಯಾ ಮನೆಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ಸಮಾರಂಭದ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೆಲವೇ ಕೆಲ ಆಪ್ತರು ಮತ್ತು ಕುಟುಂಬದವರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದರು.