ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಟಾಲಿವುಡ್ ಸೂಪರ್ಸ್ಟಾರ್ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಶೀಘ್ರದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಜೂನ್ 9 ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ಮೆಗಾ ಬ್ರದರ್ ನಾಗಬಾಬು ಅವರ ಮನೆಯಲ್ಲಿ ಅದ್ಧೂರಿಯಾಗಿ ಸಮಾರಂಭ ನಡೆದಿತ್ತು. ಮೆಗಾಸ್ಟಾರ್ ಚಿರಂಜೀವಿ ಮತ್ತು ಸುರೇಖಾ ದಂಪತಿಯ ಸಮ್ಮುಖದಲ್ಲಿ ಹಾರ ಬದಲಾಯಿಸಿಕೊಂಡಿದ್ದರು. ಇದೀಗ ತಾರಾ ಜೋಡಿಯ ಮದುವೆಗೆ ಮುಹೂರ್ತ ನಿಗದಿಯಾಗಿದೆ.
ಮದುವೆ ಯಾವಾಗ? ಎಲ್ಲಿ?: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆಗೆ ಡೇಟ್ ಫಿಕ್ಸ್ ಆಗಿದೆ. ಮಾಹಿತಿ ಪ್ರಕಾರ, ಇಟಲಿಯಲ್ಲಿ ನವೆಂಬರ್ 1 ರಂದು ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಡೆಸ್ಟಿನೇಶನ್ ವೆಡ್ಡಿಂಗ್ ನಡೆಯಲಿದೆ. ಮದುವೆಗಾಗಿ ಮೆಗಾ ಫ್ಯಾಮಿಲಿ ಇಟಲಿಗೆ ತೆರಳಲಿದ್ದಾರೆ. ಆದರೆ, ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ಬ್ಯುಸಿ ಶೆಡ್ಯೂಲ್ನಿಂದಾಗಿ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗದೇ ಇರಬಹುದು ಎನ್ನಲಾಗಿದೆ.
ಪ್ರೀತಿಸಿ ಮದುವೆಯಾಗುತ್ತಿರುವ ಜೋಡಿ: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ 2016 ರಿಂದ ಪ್ರೀತಿಯಲ್ಲಿದ್ದರು. ಜೂನ್ 9 ರಂದು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ವರುಣ್ ತೇಜ್ ನಟ ಹಾಗೂ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ. ಜೊತೆಗೆ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರ ಸೋದರಳಿಯ. ವರುಣ್ ಮತ್ತು ಲಾವಣ್ಯ 2017ರ ಮಿಸ್ಟರ್ ಚಿತ್ರದ ಸೆಟ್ನಲ್ಲಿ ಪರಸ್ಪರ ಭೇಟಿಯಾದರು. ಅಲ್ಲಿಂದ ಸ್ನೇಹ ಬೆಳೆದು ನಂತರ ಪ್ರೀತಿಸಲು ಶುರು ಮಾಡಿದರು.
ಇದನ್ನೂ ಓದಿ:'ಮಟ್ಕಾ': ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮೆಗಾ ಪ್ರಿನ್ಸ್ ವರುಣ್ ತೇಜ್