ಕರ್ನಾಟಕ

karnataka

ETV Bharat / entertainment

2023ರಲ್ಲಿ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ತಾರೆಯರು ಇವರೇ.. - ಈಟಿವಿ ಭಾರತ ಕನ್ನಡ

ಕನ್ನಡ ಚಿತ್ರರಂಗದ ತಾರೆಯರು ತಮ್ಮ ಬಹುದಿನದ ಗೆಳಯ ಹಾಗೂ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ, ಕಿರುತೆರೆಯಿಂದಲೂ ಸಾಕಷ್ಟು ಕಲಾವಿದರು ಈ ವರ್ಷ ಹೊಸ ಜೀವನ ಆರಂಭಿಸಿದ್ದಾರೆ.

These are the Sandalwood stars who married in 2023
2023ರಲ್ಲಿ ಸಪ್ತಪದಿ ತುಳಿದ ಸ್ಯಾಂಡಲ್​ವುಡ್​ ತಾರೆಯರು ಇವರೇ..

By ETV Bharat Karnataka Team

Published : Dec 18, 2023, 10:42 PM IST

2023ನೇ ವರ್ಷ ಕೊನೆಗೊಳ್ಳಲು ಇನ್ನೇನು 12 ದಿನಗಳು ಬಾಕಿ ಉಳಿದಿವೆ. ಈ ವರ್ಷ ಕನ್ನಡ ಸಿನಿಮಾಗಳು ಅಷ್ಟೊಂದು ದೊಡ್ಡ ಮಟ್ಟದಲ್ಲಿ ಸದ್ದು ಮಾಡದೇ ಇದ್ರು, ಕೆಲ ತಾರೆಯರ ಪಾಲಿಗೆ ಇದು ಅದೃಷ್ಟದ ವಸಂತ. ಏಕೆಂದರೆ ಕೆಲವೊಬ್ಬರು ಸಿನಿಮಾದಲ್ಲಿ ಸಕ್ಸಸ್​ ಕಂಡಿದ್ದರೆ, ಮತ್ತೆ ಕೆಲವರು ತಾವು ಇಷ್ಟಪಟ್ಟ ಸಂಗಾತಿಯೊಂದಿಗೆ ವೈವಾಹಿಕ ಜೀವನಕ್ಕೂ ಕಾಲಿಟ್ಟಿದ್ದಾರೆ.

ಈ ವರ್ಷ ಮದುವೆ ವಿಚಾರದಲ್ಲಿ ಹೆಚ್ಚು ಸುದ್ದಿಯಾದ ಸ್ಯಾಂಡಲ್​ವುಡ್​ ಜೋಡಿ ಎಂದರೆ ಗ್ಲ್ಯಾಮರ್ ಬೆಡಗಿ ಹರಿಪ್ರಿಯಾ ಹಾಗೂ ಕಂಚಿನ ಕಂಠದ ನಟ ವಸಿಷ್ಠ ಸಿಂಹ. ಇವರಿಬ್ಬರು ಕೆಲ ವರ್ಷಗಳಿಂದ ಪ್ರೀತಿಯಲ್ಲಿದ್ದರು. ಈ ಸೀಕ್ರೆಟ್​ ಅನ್ನು ಹಾಗೆಯೇ ಕಾಪಾಡಿಕೊಂಡು ಬಂದಿದ್ದ ಸಿಂಹಪ್ರಿಯಾ 2023ರ ಆರಂಭದಲ್ಲಿ ಮದುವೆಯಾದರು.

ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಮದುವೆಗೆ ವಸಿಷ್ಠ ಹಾಗೂ ಹರಿಪ್ರಿಯಾ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಿದ್ದರು. ನಟ ಶಿವರಾಜ್ ಕುಮಾರ್, ಡಾಲಿ ಧನಂಜಯ್, ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ ಸ್ಯಾಂಡಲ್​ವುಡ್​ ತಾರೆಯರು ದಂಪತಿಯ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

ಈ ಜೋಡಿ ಬಳಿಕ ರೆಬಲ್ ಸ್ಟಾರ್ ಅಂಬರೀಶ್​ ಹಾಗೂ ಸುಮಲತಾ ಮಗ ಅಭಿಷೇಕ್ ಅಂಬರೀಶ್​ ವಿವಾಹ ನಡೆಯಿತು. ಫ್ಯಾಷನ್ ಐಕಾನ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಜೊತೆ ಸಪ್ತಪದಿ ತುಳಿದರು. ಹಲವು ವರ್ಷಗಳಿಂದ ಅವಿವಾ ಬಿದ್ದಪ್ಪನನ್ನು ಪ್ರೀತಿಸುತ್ತಿದ್ದ ಅಭಿಷೇಕ್ ಅಂಬರೀಶ್​ ಜೂನ್ 5ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಈ ಮದುವೆಯಲ್ಲಿ ಸೌತ್ ಸ್ಟಾರ್​ಗಳಾದ ರಜನಿಕಾಂತ್ , ಮೋಹನ್ ಬಾಬು, ರಾಜಕಾರಣಿ ವೆಂಕಯ್ಯ ನಾಯ್ಡು, ಶಿವರಾಜ್ ಕುಮಾರ್, ಕಿಚ್ಚ ಸುದೀಪ್, ಯಶ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಇನ್ನೂ ವಿಕ್ರಾಂತ್ ರೋಣ ಸಿನಿಮಾದಲ್ಲಿ ನಿರೂಪ್ ಭಂಡಾರಿ ಜೋಡಿಯಾಗಿ ಅಭಿನಯಿಸಿದ್ದ ನಟಿ ನೀತಾ ಅಶೋಕ್ ಗೆಳೆಯ ಸತೀಶ್ ಅವರೊಂದಿಗೆ ಹಸೆಮಣೆ ಏರಿದರು. ಜುಲೈ 10ರಂದು ನೀತಾ ಅಶೋಕ್ ಎರಡು ಕುಟುಂಬಗಳ ಸಮ್ಮುಖದಲ್ಲಿ ಸತೀಶ್​ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕನ್ನಡ ಚಿತ್ರರಂಗದಲ್ಲಿ ನಾವಿಬ್ಬರು ಆತ್ಮೀಯ ಸ್ನೇಹಿತರು ಎಂದೇ ಹೇಳಿಕೊಳ್ಳುತ್ತಿದ್ದ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ. ಈ ಜೋಡಿ ನಾವಿಬ್ಬರು ಪ್ರೇಮಿಗಳು. ಈ ವರ್ಷ ಮದುವೆ ಆಗ್ತಾ ಇದ್ದೇವೆ ಎಂದು ಚಿತ್ರರಂಗಕ್ಕೆ ಸರ್​ಪ್ರೈಸ್ ಕೊಟ್ಟಿದರು. ಆಗಸ್ಟ್ ತಿಂಗಳಲ್ಲಿ ಹರ್ಷಿಕಾ ಹಾಗೂ ಭುವನ್ ಕೊಡವ ಸಂಪ್ರದಾಯದಂತೆ ಹಸೆಮಣೆ ಏರಿದರು. ಮದುವೆ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಗೋಲ್ಡನ್ ಸ್ಟಾರ್ ಗಣೇಶ್, ಉಪೇಂದ್ರ ಹಾಗೂ ಪ್ರಿಯಾಂಕ ಉಪೇಂದ್ರ, ಅಮೂಲ್ಯ ಫ್ಯಾಮಿಲಿ ಸೇರಿದಂತೆ ಚಿತ್ರರಂಗದ ಸಾಕಷ್ಟು ಜನ ಸೆಲೆಬ್ರಿಟಿಗಳು ಬಂದಿದ್ದರು.

ಮಾಜಿ ಬಿಗ್ ಬಾಸ್ ಸ್ಪರ್ಧಿ ಒಳ್ಳೆ ಹುಡುಗ ಪ್ರಥಮ್ ಅವರು ಭಾನುಶ್ರೀ ಎಂಬವರ ಜೊತೆ ಮದುವೆ ಆದರು. ಜೂನ್ ತಿಂಗಳಲ್ಲಿ ಭಾನುಶ್ರೀ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಪ್ರಥಮ್ ನವೆಂಬರ್ ತಿಂಗಳಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರ ಮದುವೆಯಲ್ಲಿ ಎರಡು ಕುಟುಂಬದವರು ಹಾಗು ಸಿನಿಮಾರಂಗದ ಗೆಳೆಯರು ಭಾಗವಹಿಸಿದರು.

ಇನ್ನೂ ರಾಮಾ ರಾಮಾ ರೇ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕರಾಗಿ ಗುರುಸಿಕೊಂಡವರು ವಾಸುಕಿ ವೈಭವ್ ಕೂಡ ಸೈಲೆಂಟ್ ಆಗಿ ಮದುವೆಯಾದರು. ನವೆಂಬರ್ 16ರಂದು ತಮ್ಮ ಬಹುದಿನದ ಗೆಳೆತಿ ಬೃಂದಾ ವಿಕ್ರಂ ಜೊತೆ ಸಪ್ತಪದಿ ತುಳಿದರು.

ಈ ಮದುವೆ ಪರ್ವ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ಜೋರಾಗಿದೆ. ಕಾಮಿಡಿ ರಿಯಾಲಿಟಿ ಶೋನಲ್ಲಿ ಮಿಂಚಿದ್ದ ಸಂಜು ಬಸಯ್ಯ ಹಾಗೂ ಪಲ್ಲವಿ, ಕಿರುತೆರೆಯಲ್ಲಿ ಖಳನಾಯಕಿ ಪಾತ್ರದಲ್ಲಿ ನಟಿಸುತ್ತಿರುವ ಶೋಭಿತಾ ಹಾಗೇ ಸೌರಭ್ ಹಾಗೂ ನಮ್ರತಾ, ಇನ್ನು ಚೇತನ್, ಯಶಸ್ವಿನಿ, ಸೇರಿದಂತೆ ಜನಪ್ರಿಯ ಕಿರುತೆರೆ ಕಲಾವಿದರು ಈ ವರ್ಷದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

ಒಟ್ಟಾರೆ ಕನ್ನಡ ಚಿತ್ರರಂಗದ ತಾರೆಯರು ತಮ್ಮ ಬಹುದಿನದ ಗೆಳಯ ಹಾಗೂ ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರೆ, ಕಿರುತೆರೆಯಿಂದಲೂ ಸಾಕಷ್ಟು ಕಲಾವಿದರು ಹೊಸ ಜೀವನ ಆರಂಭಿಸಿದ್ದಾರೆ.

ಇದನ್ನೂ ಓದಿ:ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಹಸೆಮಣೆ ಏರಿದ ವಾಸುಕಿ ವೈಭವ್

ABOUT THE AUTHOR

...view details