ಕಿರುತೆರೆ, ಹಿರಿತೆರೆಗಳು ಸೆಲೆಬ್ರಿಟಿಗಳ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ. ಅದೆಷ್ಟೋ ಮಂದಿಯ ಜೀವನವನ್ನೇ ಬದಲಾಯಿಸಿ, ಇಂದು ಸ್ಟಾರ್ ಪಟ್ಟದಲ್ಲಿದ್ದಾರೆ. ಪ್ರೇಕ್ಷಕರ ಮನೆಮನ ತಲುಪಿದ್ದಾರೆ. ಜನಪ್ರಿಯ ಕಿರುತೆರೆ ನಟಿಯರಾದ ಅಂಕಿತಾ ಲೋಖಂಡೆ, ದಿವ್ಯಾಂಕ ತ್ರಿಪಾಠಿ, ಅನಿತಾ ಹಸ್ಸನಂದನಿ ಮತ್ತು ಊರ್ವಶಿ ಧೋಲಾಕಿಯಾ ತಮ್ಮ ಜೀವನವನ್ನು ಬದಲಾಯಿಸಿಕೊಳ್ಳಲು ಕಿರುತೆರೆ ಹೇಗೆ ಸಹಾಯ ಮಾಡಿತು ಎಂಬುದರ ಕುರಿತು ವಿವರಗಳನ್ನು ಹಂಚಿಕೊಂಡಿದ್ದಾರೆ.
ಜನಪ್ರಿಯ ದಿ ಕಪಿಲ್ ಶರ್ಮಾ ಶೋನಲ್ಲಿ ಈ ನಟಿಯರು ಭಾಗಿಯಾಗಿ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. ನಟಿ ಅಂಕಿತಾ ಲೋಖಂಡೆ ಮಾತನಾಡಿ, "ನಾನು ಈ ಹಿಂದೆ ಬ್ಯುಸಿ ಶೂಟಿಂಗ್ನಲ್ಲಿ ಭಾಗಿಯಾಗಿದ್ದೆ. ಆ ಮೂರು ತಿಂಗಳ ಅವಧಿಯಲ್ಲಿ ಮೊದಲ ಬಾರಿಗೆ ಲಾಲ್‌ಬಾಗ್ಚಾ ರಾಜಾ (Lalbaugcha Raja)ಗೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದುಕೊಂಡೆ, ಅಂದು ಅಭಿಮಾನಿಗಳ ಅಭಿಮಾನ, ಪ್ರೀತಿ ತಿಳಿಯಿತು'' ಎಂದರು.
"ನಾನು ಪವಿತ್ರಾ ರಿಶ್ತಾ ಸೆಟ್‌ನಲ್ಲಿಯೇ ಇರುತ್ತಿದ್ದೆ. ಹೊರಗೆ ಹೋಗುತ್ತಿರಲಿಲ್ಲ. ನನ್ನ ತಾಯಿ ನನಗೆ ಬೇಕಾದ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳನ್ನು ಶೂಟಿಂಗ್ ಸೆಟ್ಗೆ ತಂದು ಕೊಡುತ್ತಿದ್ದರು. ಆ ಹೊತ್ತಿಗೆ ಪವಿತ್ರಾ ರಿಶ್ತಾ ಪ್ರಸಾರವಾಗಿದ್ದರೂ, ಸೀರಿಯಲ್ ಗಳಿಸುತ್ತಿರುವ ಪ್ರತಿಕ್ರಿಯೆಯ ಬಗ್ಗೆ ನನಗೆ ತಿಳಿದಿರಲಿಲ್ಲ. ಒಮ್ಮೆ ನಾನು ಆಕಸ್ಮಿಕವಾಗಿ ದೇವರ ದರ್ಶನಕ್ಕಾಗಿ ಲಾಲ್‌ಬಾಗ್ಚಾ ರಾಜಾಗೆ (ಗಣಪಪತಿ ದೇವಾಲಯ) ಭೇಟಿ ಕೊಟ್ಟೆ. ನಾನು ಟ್ಯಾಕ್ಸಿಯಲ್ಲಿ ಅಲ್ಲಿಗೆ ಹೋದೆ. ಆ ಸಂದರ್ಭ ನಮ್ಮ ತಂಡದ ಕಠಿಣ ಪರಿಶ್ರಮದ ಫಲಿತಾಂಶವನ್ನು ನಾನು ಮೊದಲ ಬಾರಿಗೆ ನೋಡಿದೆ. ಅಭಿಮಾನಿಗಳ ಅಭಿಮಾನ, ಪ್ರೀತಿಗೆ ಮಿತಿಯೇ ಇರಲಿಲ್ಲ" ಎಂದು ಅಂಕಿತಾ ಹೇಳಿಕೊಂಡರು.
"ನಾನು ಮತ್ತು ನನ್ನ ಸ್ನೇಹಿತೆ ಟ್ಯಾಕ್ಸಿಯಿಂದ ಹೊರಬಂದ ತಕ್ಷಣ ಜನರು ನನ್ನ ಸುತ್ತಲೂ ಜಮಾಯಿಸಿದರು. ಅವರೊಂದಿಗೆ ಕೆಲ ಕ್ಷಣ ಕಳೆದೆ. ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು. ಆ ಕ್ಷಣ ನಾನೇನೋ ಸಾಧಿಸಿಬಿಟ್ಟೆ ಎಂಬ ಭಾವನೆ ಮೂಡಿತು'' ಎಂದು ತಿಳಿಸಿದರು. ಇನ್ನು "ಮೂರು ದಿನಗಳ ಕಾರ್ಯಕ್ರಮಕ್ಕಾಗಿ ದಕ್ಷಿಣ ಆಫ್ರಿಕಾಕ್ಕೆ ಹೋಗಿದ್ದೆ. ಜನರು ನನ್ನನ್ನು ವೈಯಕ್ತಿಕವಾಗಿ ನೋಡಿ ಭಾವುಕರಾದರು. ಜನರು ನನ್ನನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ವರ್ಣಿಸಲು ಅಸಾಧ್ಯ. ನಮ್ಮ ತಂಡದ, ಕಿರುತೆರೆಯ ಯಶಸ್ಸಿನ ಪ್ರಮಾಣವು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಹಬ್ಬಿದೆ. ನಮ್ಮ ಕಾರ್ಯಕ್ರಮಗಳು ಇನ್ನೂ ಪ್ರಸಾರದಲ್ಲಿವೆ ಮತ್ತು ಆಯಾ ಸ್ಥಳೀಯ ಭಾಷೆಗಳಲ್ಲಿ ಡಬ್ ಆಗುತ್ತಿವೆ'' ಎಂದು ಹರ್ಷ ವ್ಯಕ್ತಪಡಿಸಿದರು.