ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಬಾಬಿ ಸಿಂಹ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಜಿಗರ್ಥಂಡ' ಸಿನಿಮಾದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಈ ಪ್ರತಿಭಾವಂತ ನಟ ಕಿರಣ್ ರಾಜ್ ನಿರ್ದೇಶನದ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದರು. ಇದೀಗ ಬಾಬಿ ಸಿಂಹ ಅವರು ರಘು ಕೋವಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ರಘು ಕೋವಿ ಮೊದಲ ನಿರ್ದೇಶನ: ಬರಹಗಾರರಾಗಿ ಖ್ಯಾತಿ ಪಡೆದಿರುವ ರಾಜ್ಯ ಪ್ರಶಸ್ತಿ ವಿಜೇತ ರಘು ಕೋವಿ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ‘ದಿಲ್ ಮಾರ್’ ಸಿನಿಮಾ ಮೂಲಕ ಹೀರೋ ಆಗಿ ಅದೃಷ್ಟ ಪರೀಕ್ಷೆಗಿಳಿದಿರುವ ರಾಮ್ಗೆ ರಘು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ರಾಮ್ ಅವರು ರಘು ಕೋವಿ ನಿರ್ದೇಶನದಲ್ಲಿ ನಟಿಸುತ್ತಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿಸಿದೆ.
'ಹಂಸಲೇಖ ಕಥಾ ಕಣಜ'ದಿಂದ ಸ್ಯಾಂಡಲ್ವುಡ್ಗೆ ಪರಿಚಿತರಾದ ರಘು ಕೋವಿ, 'ಕೃಷ್ಣಲೀಲಾ' ಅತ್ಯುತ್ತಮ ಬರವಣಿಗೆಗೆ ರಾಜ್ಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಈ ಮೊದಲು ರಾಜೇಂದ್ರ ಸಿಂಗ್ ಬಾಬು, ಎಸ್ ಎಸ್ ರಾಜಶೇಖರ್, ಕೆ ವಿ ರಾಜ್, ಶಶಾಂಕ್, ಉಪೇಂದ್ರ ಸಿನಿಮಾಗಳಲ್ಲಿ ಕೋ ಡೈರೆಕ್ಟರ್ ಆಗಿ ರಘು ಕೋವಿ ದುಡಿದಿದ್ದಾರೆ. ಇದೀಗ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟು ಮೊದಲ ಬಾರಿಗೆ ನಿರ್ದೇಶನದ ಅಖಾಡಕ್ಕೆ ಇಳಿದಿದ್ದಾರೆ.