ನವದೆಹಲಿ: ವಿವಾದಿತ ಚಲನಚಿತ್ರ 'ದಿ ಕೇರಳ ಸ್ಟೋರಿ' ಪ್ರದರ್ಶನದ ಮೇಲೆ ಪಶ್ಚಿಮ ಬಂಗಾಳ ಸರ್ಕಾರ ವಿಧಿಸಿದ್ದ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆವೊಡ್ಡಿದೆ. ಇದೇ ವೇಳೆ ಭದ್ರತೆಯ ಕಾರಣದಿಂದ ಚಿತ್ರ ಪ್ರದರ್ಶನವನ್ನು ಥಿಯೇಟರ್ ಮಾಲೀಕರು ನಿಲ್ಲಿಸಿರುವ ನಿರ್ಧಾರ ಕುರಿತಂತೆ ಪ್ರೇಕ್ಷಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಮಿಳುನಾಡು ಸರ್ಕಾರಕ್ಕೆ ಸರ್ವೋಚ್ಛ ನ್ಯಾಯಾಲಯ ಸೂಚಿಸಿದೆ.
ಪಶ್ಚಿಮ ಬಂಗಾಳದಲ್ಲಿ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಿರುವುದನ್ನು ಮತ್ತು ತಮಿಳುನಾಡಿನಲ್ಲಿ ಸಿನಿಮಾವನ್ನು ಪ್ರದರ್ಶಿಸದಂತೆ ಥಿಯೇಟರ್ ಮಾಲೀಕರು ತೆಗೆದುಕೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಚಿತ್ರದ ನಿರ್ಮಾಪಕರು ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ಇಂದಿನ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು ಬಂಗಾಳ ಸರ್ಕಾರ ವಿಧಿಸಿದ್ದ ನಿಷೇಧಕ್ಕೆ ತಡೆ ನೀಡಿದೆ.
ಇದೇ ವೇಳೆ, 32 ಸಾವಿರ ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಎಂಬ ಆರೋಪದ ಕುರಿತಂತೆ ಮೇ 20ರ ಸಂಜೆ 5 ಗಂಟೆಯೊಳಗೆ ಚಲನಚಿತ್ರದಲ್ಲಿ ಹಕ್ಕುತ್ಯಾಗದ ಸೂಚನೆ ಹಾಕುವಂತೆ ನಿರ್ಮಾಪಕರಿಗೆ ನಿರ್ದೇಶನ ನೀಡಿದೆ. ಅಂದರೆ, ಈ ಕುರಿತಾದ ಯಾವುದೇ ದೃಢೀಕೃತ ಮಾಹಿತಿ ಇಲ್ಲ ಮತ್ತು ಚಲನಚಿತ್ರವು ಕಾಲ್ಪನಿಕವಾಗಿದೆ ಎಂದು ಹೇಳಬೇಕು. ಮತ್ತೊಂದೆಡೆ, ಚಿತ್ರಕ್ಕೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್‌ಸಿ) ಪ್ರಮಾಣೀಕರಣವನ್ನು ಪ್ರಶ್ನಿಸುವ ಅರ್ಜಿಗಳನ್ನು ನಿರ್ಧರಿಸುವ ಮೊದಲು ಚಲನಚಿತ್ರವನ್ನು ವೀಕ್ಷಿಸಲು ಬಯಸುವುದಾಗಿ ನ್ಯಾಯಪೀಠ ಹೇಳಿದೆ. ಈ ಅರ್ಜಿಗಳ ವಿಚಾರಣೆಯು ಜುಲೈ ಎರಡನೇ ವಾರದಲ್ಲಿ ನಡೆಯಲಿದೆ ಎಂದೂ ತಿಳಿಸಿದೆ.