ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸರ್ಕಾರವು 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ನಿಷೇಧಿಸಿದ ಒಂದು ದಿನದ ನಂತರ ಚಲನಚಿತ್ರ ನಿರ್ದೇಶಕ ಸುದಿಪ್ತೋ ಸೇನ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ನಿರ್ಧಾರವು "ರಾಜಕೀಯ ಪ್ರೇರಿತ" ಎಂದು ಆರೋಪಿಸಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಚಲನಚಿತ್ರವನ್ನು ವೀಕ್ಷಿಸಿ ನಂತರ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು. ಅಲ್ಲದೇ "ಮಮತಾ ಬ್ಯಾನರ್ಜಿ ಅವರು ಚಲನಚಿತ್ರವನ್ನು ನೋಡದೇ ಅದನ್ನು ನಿಷೇಧಿಸಿರುವುದು ಅತ್ಯಂತ ದುರದೃಷ್ಟಕರ" ಎಂದು ಸುದಿಪ್ತೋ ಸೇನ್ ತಿಳಿಸಿದ್ದಾರೆ.
"ಚಿತ್ರದಿಂದಾಗಿ ರಾಜ್ಯದಲ್ಲಿ ಒಂದೇ ಒಂದು ಅಹಿತಕರ ಘಟನೆ ನಡೆದಿಲ್ಲ. ಚಲನಚಿತ್ರವನ್ನು ನಿಷೇಧಿಸುವ ನಿರ್ಧಾರ ರಾಜಕೀಯ ಪ್ರೇರಿತ. ಚಲನಚಿತ್ರವನ್ನು ನೋಡಿ ನಂತರ ಯಾವುದೇ ನಿರ್ಧಾರ ತೆಗೆದುಕೊಳ್ಳುವಂತೆ ನಾನು ಅವರಲ್ಲಿ (ಸಿಎಂ ಮಮತಾ ಬ್ಯಾನರ್ಜಿ) ವಿನಂತಿಸುತ್ತೇನೆ" ಎಂದು ಸುದಿಪ್ತೋ ಸೇನ್ ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಪಶ್ಚಿಮ ಬಂಗಾಳದಲ್ಲಿ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿತ್ತು. ಅಲ್ಲಿ ಸಿನಿಮಾ ಹಾಲ್ ಹೌಸ್‌ಫುಲ್ ಆಗಿತ್ತು ಎಂದು ಅವರು ಹೇಳಿದರು.
"ಪಶ್ಚಿಮ ಬಂಗಾಳ ಸಿಎಂ ಅವರ ನಿಷೇಧದ ನಿರ್ಧಾರದ ನಂತರ ಚಲನಚಿತ್ರ ಮಂದಿರದಲ್ಲಿ ಪ್ರದರ್ಶನವನ್ನು ಮಧ್ಯದಲ್ಲಿ ನಿಲ್ಲಿಸಿದರು. ನಾನು ರಾಜಕಾರಣಿಯಲ್ಲ, ನಾನು ಚಲನಚಿತ್ರ ನಿರ್ದೇಶಕ, ನಾನು ಚಲನಚಿತ್ರವನ್ನು ಮಾತ್ರ ಮಾಡಬಲ್ಲೆ. ನೀವು ಅದನ್ನು ನೋಡಲು ಬಯಸುವಿರೋ ಅಥವಾ ಬೇಡವೋ ಎಂಬುದನ್ನು ನೀವೇ ನಿರ್ಧರಿಸುವುದು. ಕೋಲ್ಕತ್ತಾದಲ್ಲಿ ನಾಲ್ಕು ದಿನಗಳ ಕಾಲ ಚಿತ್ರ ಬಿಡುಗಡೆಯಾದಾಗ ಯಾವುದೇ ಸಮಸ್ಯೆ ಇರಲಿಲ್ಲ. ಇದ್ದಕ್ಕಿದ್ದಂತೆ ದೀದಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿರಬಹುದು ಎಂದು ಭಾವಿಸಿದರು" ಎಂದು ನಿರ್ದೇಶಕ ಸೇನ್ ತಿಳಿಸಿದರು.
"ಮಹುವಾ ಮೊಯಿತ್ರಾ, ಮಮತಾ ಬ್ಯಾನರ್ಜಿ ಅವರು ವಾಕ್ ಸ್ವಾತಂತ್ರ್ಯ, ಮಾನವ ಹಕ್ಕುಗಳ ವಿಷಯದಲ್ಲಿ ಚಾಂಪಿಯನ್. ಪದ್ಮಾವತ್ ಚಲನಚಿತ್ರವನ್ನು ನಿಷೇಧಿಸಿದಾಗ ಸಿನಿಮಾವನ್ನು ಬೆಂಬಲಿಸಲು ಬಂದ ಮೊದಲ ರಾಜಕೀಯ ನಾಯಕಿ ಮಮತಾ ಬ್ಯಾನರ್ಜಿ. ಆದರೆ ಅವರಿಗೆ ನನ್ನ ಸಿನಿಮಾ ಸಂಬಂಧ ಸಮಸ್ಯೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಇದೆ ಎಂದು ಅವರು ಭಾವಿಸಿದ್ದಾರೆಂದು ತಿಳಿಸಿದರು.