ಬೆಂಗಳೂರು: ತಮ್ಮ ವಿರುದ್ಧ ಸುದ್ದಿ ಪ್ರಸಾರ ಮಾಡದಂತೆ ಕೋರಿ ನಟ ಕಿಚ್ಚ ಸುದೀಪ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಮೆಯೋಹಾಲ್ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ ಸುದೀಪ್, ತಮಗೆ ಬಂದಿರುವ ಅನಾಮಧೇಯ ಪತ್ರದಲ್ಲಿರುವ ಆರೋಪಗಳಿಗೆ ಸಂಬಂಧಿಸಿದ ಅಂಶಗಳನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡಕೂಡದು. ಈ ಬಗ್ಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಅರ್ಜಿ ಸಂಬಂಧ ಸೆಷನ್ಸ್ ಕೋರ್ಟ್ ವಿಚಾರಣೆ ನಡೆಸಿದ್ದು, ಇಂದು ಆದೇಶ ಹೊರಬೀಳುವ ಸಾಧ್ಯತೆ ಇದೆ.
ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸುದೀಪ್ ಅವರಿಗೆ ಗನ್ ಮ್ಯಾನ್ ನೀಡುವಂತೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ನಿರ್ಮಾಪಕ ಜಾಕ್ ಮಂಜು ಮನವಿ ಸಲ್ಲಿಸಲು ಬಂದಿದ್ದರು. ಹಿರಿಯ ಅಧಿಕಾರಿಗಳು ಮೀಟಿಂಗ್ನಲ್ಲಿದ್ದ ಕಾರಣ ವಾಪಸ್ ಆಗಿದ್ದಾರೆ. ಅನಾಮಧೇಯ ಪತ್ರದಲ್ಲಿ ಸುದೀಪ್ ಅವರಿಗೆ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ನಟನ ಪರವಾಗಿ ಪುಟ್ಟೇನಹಳ್ಳಿ ಠಾಣೆಯಲ್ಲಿ ಮಂಜು ದೂರು ನೀಡಿದ್ದರು.
ಏನಿದು ಪ್ರಕರಣ?: ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ಅಭಿನಯ ಚಕ್ರವರ್ತಿ ಕಳೆದ ಕೆಲ ದಿನಗಳಿಂದ ಎರಡು ವಿಚಾರವಾಗಿ ಭಾರಿ ಸುದ್ದಿಯಲ್ಲಿದ್ದಾರೆ. ಜೀವ ಬೆದರಿಕೆ ಪ್ರಕರಣ ಒಂದು ವಿಚಾರ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ ಪರ ಪ್ರಚಾರ ಮತ್ತೊಂದು ಸುದ್ದಿ. ಕಳೆದ ತಿಂಗಳು ಮಾರ್ಚ್ 3ರಂದು ನಟ ಸುದೀಪ್ ಕುಟುಂಬಸ್ಥರ ಹೆಸರನ್ನು ಉಲ್ಲೇಖಿಸಿ ಅನಾಮಧೇಯ ಪತ್ರಗಳ ಮೂಲಕ ಬೆದರಿಕೆ ಹಾಕಲಾಗಿತ್ತು. ಪತ್ರ ಬಂದು ಹಲವು ದಿನಗಳಾದ ನಂತರ ಪ್ರಕರಣ ಬೆಳಕಿಗೆ ಬಂತು. ಜಾಕ್ ಮಂಜು ದೂರು ನೀಡಿದ್ದು, ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಪೊಲೀಸ್ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.
ಈ ಬಗ್ಗೆ ನಟ ಸುದೀಪ್ ಅವರೇ ಪ್ರತಿಕ್ರಿಯೆ ನೀಡುವ ಮೂಲಕ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದರು. ''ಈ ಬೆದರಿಕರ ಪತ್ರಕ್ಕೂ ರಾಜಕೀಯಕ್ಕೂ ಸಂಬಂಧವಿಲ್ಲ, ಚಿತ್ರರಂಗದವರಿಂದಲೇ ಈ ಎಲ್ಲ ವಿಷಯಗಳು ನಡೆದಿದೆ'' ಎಂದು ತಿಳಿಸಿದ್ದರು. ಅಲ್ಲದೇ ಸೂಕ್ತ ಮಾರ್ಗದಲ್ಲಿ ಸರಿಯಾದ ಉತ್ತರ ಕೊಡುತ್ತೇನೆ. ಕಾನೂನು ಪ್ರಕಾರವೇ ಮುಂದೆ ಹೆಜ್ಜೆ ಇಡುತ್ತೇನೆ ಎಂದಿದ್ದರು.