ನಿರ್ದೇಶಕ ಹಾಗೂ ನಟನಾಗಿ ತನ್ನದೇ ಬೇಡಿಕೆ ಹೊಂದಿರುವ ರಿಷಬ್ ಶೆಟ್ಟಿ ಕಾಂತಾರ ಸಿನಿಮಾದಲ್ಲಿ ಅಭಿನಯದ ಜೊತೆಗೆ ನಿರ್ದೇಶನ ಮಾಡಿದ್ದಾರೆ. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿ 18 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಅಜನೀಶ್ ಲೋಕನಾಥ್ ಸಂಗೀತ ನೀಡಿರುವ, ಗೀತರಚನೆಕಾರ ಪ್ರಮೋದ್ ಮರವಂತೆ ರಚಿಸಿರುವ ಸಿಂಗಾರ ಸಿರಿಯೆ ಎಂಬ ಮೋಹಕ ಹಾಡಿನಲ್ಲಿ ಜಾನಪದ ಸೊಗಡು ಮೇಳೈಸಿದೆ.
ಕರಾವಳಿ ತೀರದ ಸೊಗಡಿನಲ್ಲಿ ಮೂಡಿಬಂದಿರುವ ಈ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಹಾಡಿನಲ್ಲಿ ಕರುನಾಡ ಸಂಸ್ಕ್ರತಿ ಹಾಗು ಭವ್ಯ ಪರಂಪರೆಯನ್ನು ಮನಮುಟ್ಟುವಂತೆ ನಿರ್ದೇಶಕ ರಿಷಬ್ ಶೆಟ್ಟಿ ಪ್ರದರ್ಶಿಸಿದ್ದಾರೆ. ಹಲವು ಜನಪದ ನೃತ್ಯಗಳ ಹಿನ್ನೆಲೆಯಲ್ಲಿ ನಾಯಕ, ನಾಯಕಿಗೆ ಪ್ರೇಮದ ವಿಷಯ ತಿಳಿಸುವ ರೀತಿ ಈ ಹಾಡು ಸೊಗಸಾಗಿದೆ. ವಿಜಯ್ ಪ್ರಕಾಶ್, ಅನನ್ಯ ಭಟ್ ಹಾಗೂ ಪನ್ನಾರ್ ವಲ್ಟುರ್ ಕಂಠಸಿರಿ ಹಾಡಿನ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ.