ಕರನಾಡ ಚಕ್ರವರ್ತಿ ಶಿವ ರಾಜ್ಕುಮಾರ್ ಹಾಗೂ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ ಅಭಿನಯದ ಮುಂದಿನ ಬಹುನಿರೀಕ್ಷಿತ ಸಿನಿಮಾ ಕರಟಕ ದಮನಕ. ಶೀರ್ಷಿಕೆಯಿಂದಲೇ ಸೌತ್ ಸಿನಿಮಾ ರಂಗದಲ್ಲಿ ಗಮನ ಸೆಳೆಯುತ್ತಿರುವ ಈ ಚಿತ್ರವನ್ನು ವಿಕಟಕವಿ ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಕುತೂಹಲ ಮೂಡಿದೆ.
ಮಾಹಿತಿ ಹಂಚಿಕೊಂಡ 'ಕರಟಕ ದಮನಕ' ತಂಡ: ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿರುತ್ತಿರುವ 'ಕರಟಕ ದಮನಕ' ಚಿತ್ರದ ಕುರಿತು ಶಿವ ರಾಜ್ಕುಮಾರ್, ಪ್ರಭುದೇವ, ಯೋಗರಾಜ್ ಭಟ್, ನಟಿಯರಾದ ಪ್ರಿಯಾ ಆನಂದ್, ನಿಶ್ವಿಕಾ ನಾಯ್ಡು, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ತನಿಕೆಲ್ಲ ಭರಣಿ, ಕ್ಯಾಮರಾಮ್ಯಾನ್ ಸಂತೋಷ್ ರೈ ಪಾತಾಜೆ ಸೇರಿದಂತೆ ಇಡೀ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಶೇ.90ರಷ್ಟು ಚಿತ್ರೀಕರಣ ಪೂರ್ಣ:ಇಂದಿಗೆ ಈ ಚಿತ್ರ ಪ್ರಾರಂಭವಾಗಿ ಒಂದು ವರ್ಷಗಳಾಗಿದೆ ಎಂದು ಮಾತು ಆರಂಭಿಸಿದ ನಿರ್ದೇಶಕ ಯೋಗರಾಜ್ ಭಟ್, "ಕರಟಕ ದಮನಕ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಇಬ್ಬರನ್ನು ಹೆಚ್ಚು ಸಲ ಒಟ್ಟಾಗಿ ನೋಡಿದಾಗ ಕರಟಕ ದಮನಕ ಎನ್ನುವುದು ಉಂಟು. ನಮ್ಮ ಚಿತ್ರದಲ್ಲಿ ಈ ಪಾತ್ರಗಳನ್ನು ಶಿವಣ್ಣ ಹಾಗೂ ಪ್ರಭುದೇವ ನಿರ್ವಹಿಸಿದ್ದಾರೆ. ಅವರಿಬ್ಬರ ಎನರ್ಜಿ ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ರಾಕ್ ಲೈನ್ ವೆಂಕಟೇಶ್ ಅವರು ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ವಿ. ಹರಿಕೃಷ್ಣ ಸಂಗೀತ ಸಂಯೋಜನೆಯ ಏಳು ಹಾಡುಗಳು ನಮ್ಮ ಚಿತ್ರದಲ್ಲಿವೆ. ನಾನು ಹಾಗೂ ರಾಕ್ ಲೈನ್ ವೆಂಕಟೇಶ್ ಸಹ ಚಿತ್ರದಲ್ಲಿ ನಟಿಸಿದ್ದೇವೆ. ಶೇ. 90ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಸಾಂಗ್ ಶೂಟಿಂಗ್ ಮಾತ್ರ ಬಾಕಿ ಇದೆ'' ಎಂದು ಮಾಹಿತಿ ನೀಡಿದರು.
ಯೋಗರಾಜ್ ಭಟ್ ಚಿತ್ರಗಳು ನನಗಿಷ್ಟ..ನಂತರ ಮಾತು ಶುರು ಮಾಡಿದ ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್, ''ರಾಕ್ ಲೈನ್ ಪ್ರೊಡಕ್ಷನ್ಸ್ ನನ್ನ ಕುಟುಂಬವಿದ್ದಂತೆ. ಯೋಗರಾಜ್ ಭಟ್ ಅವರ ಚಿತ್ರಗಳು ನನಗೆ ಇಷ್ಟ. ಅವರ ಎಷ್ಟೋ ಸಿನಿಮಾಗಳನ್ನು ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸಿದ್ದೇನೆ. ಅವರ ನಿರ್ದೇಶನದಲ್ಲಿ ನಟಿಸುತ್ತಿರುವುದು ಬಹಳ ಸಂತೋಷಕರ ವಿಚಾರ. ಗೆಳೆಯ ಪ್ರಭುದೇವ ಹಾಗೂ ನಾನು ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸುತ್ತಿದ್ದೇವೆ. ಈ ಸಿನಿಮಾದಲ್ಲಿ ನಾವಿಬ್ಬರು ಸ್ನೇಹಿತರಾಗಿಯೇ ನಟಿಸುತ್ತಿದ್ದೇವೆ. ಇದೊಂದು ಹೊಸ ಜಾನರ್ ಕಥೆ'' ಎಂದು ತಿಳಿಸಿದರು.