ನಂದಿನಿ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿ ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆ, ಕೆಎಂಎಫ್ ಅಧ್ಯಕ್ಷ ಎಸ್ ಭೀಮಾನಾಯ್ಕ ಅವರು ಡಾ. ಶಿವರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ, ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.
ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಕರ್ನಾಟಕ ಹಾಲು ಮಹಾಮಂಡಳಿಯ ನಂದಿನಿ ಬ್ರ್ಯಾಂಡ್ಗೆ ಇನ್ಮುಂದೆ ಡಾ. ಶಿವರಾಜ್‌ಕುಮಾರ್ ರಾಯಭಾರಿ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಒಪ್ಪಿಗೆ ಸೂಚಿಸಿದ್ದಾರೆ.
ನಂದಿನಿ ಬ್ರ್ಯಾಂಡ್ಗೆ ರಾಯಭಾರಿಯಾಗುವಂತೆ ಕೆಎಂಎಫ್ ಕೇಳಿಕೊಂಡಿತ್ತು. ಅದರಂತೆ ನಟ ಶಿವರಾಜ್‌ಕುಮಾರ್ ಕೂಡ ಬಹಳ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಕೆಎಂಎಫ್ ಮನವಿಗೆ ಸ್ಪಂದಿಸಿ, ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ಅವರು ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಮನೆಗೆ ತೆರಳಿ ಪುಷ್ಪುಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದ್ದಾರೆ.
ತಂದೆ, ಸಹೋದರನ ಬಳಿಕ ಶಿವಣ್ಣ: 1996ರಲ್ಲಿ ವರನಟ ಡಾ. ರಾಜ್‌ಕುಮಾರ್ ಅವರು ಮೊದಲ ಬಾರಿಗೆ ನಂದಿನಿ ಉತ್ಪನ್ನಗಳ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ನಂದಿನಿ ರಾಯಭಾರಿ ಆಗಿದ್ದ ದಿ. ನಟ ರಾಜ್‌ಕುಮಾರ್ ಒಂದು ರೂಪಾಯಿ ಸಂಭಾವನೆ ಪಡೆದಿರಲಿಲ್ಲ. ಅದೇ ರೀತಿ ಡಾ. ಪುನೀತ್ ರಾಜ್‌ಕುಮಾರ್ ಅವರೂ ಕೂಡ ಯಾವುದೇ ರೀತಿಯ ಸಂಭಾವನೆ ಪಡೆಯದೇ ಉಚಿತವಾಗಿ ನಂದಿನಿ ಉತ್ಪನ್ನಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಶಿವರಾಜ್‌ಕುಮಾರ್ ಕೂಡ ಸಂಭಾವನೆ ಪಡೆದಿಲ್ಲ ಅನ್ನೋದು ಅವರ ಆಪ್ತರು ಮಾತು.