ಕರ್ನಾಟಕ

karnataka

ETV Bharat / entertainment

ಶಂಕ್ರಣ್ಣನ 66ನೇ ಜನ್ಮದಿನ....ಕರಾಟೆ ಕಿಂಗ್ ಸಿನಿಜರ್ನಿಯ ಸವಿನೆನಪು - Karate King 66th Birthday

ಇಂದು ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣನ ಹುಟ್ಟಿದ ದಿನ. ಒಂದಾನೊಂದು ಕಾಲದಲ್ಲಿ ಚಿತ್ರದ ಮೂಲಕ ನಟನೆ ಆರಂಭಿಸಿದ ಶಂಕರ್​​ನಾಗ್, ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನಿರ್ಮಾಪಕರಾಗಿ ಕೂಡಾ ಶಂಕರ್​ನಾಗ್ ಗುರುತಿಸಿಕೊಂಡಿದ್ದರು.

Shankar nag Birthday
ಶಂಕ್ರಣ್ಣನ 66ನೇ ಜನ್ಮದಿನ

By

Published : Nov 9, 2020, 12:03 PM IST

Updated : Jun 29, 2022, 10:38 AM IST

ಶಂಕರ್​ ನಾಗ್, ಹೆಸರು ಕೇಳಿದೊಡನೆ ಕನ್ನಡ ಸಿನಿಮಾ ಪ್ರಿಯರಿಗೆ ಏನೋ ಒಂದು ವಿಧವಾದ ಭಕ್ತಿ, ಗೌರವ. ಆ್ಯಕ್ಟಿಂಗ್​​ನಲ್ಲಿ ವಿಭಿನ್ನ ಮ್ಯಾನರಿಸಂ, ನಿರ್ದೇಶನದಲ್ಲಿ ಸದಾ ಕ್ರಿಯಾಶೀಲತೆ ತೋರುತ್ತಿದ್ದ ಶಂಕ್ರಣ್ಣ, ಆಟೋ ಚಾಲಕರ ಪ್ರೀತಿಯ ಆಟೋರಾಜ, ಕರಾಟೆ ಕಿಂಗ್ ಶಂಕರ್ ​​ನಾಗ್ ಹುಟ್ಟಿದ ದಿನ ಇಂದು. ಅವರು ಬದುಕಿದ್ದರೆ ಇಂದು 66ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು.

ಅಭಿಮಾನಿಗಳ ಪ್ರೀತಿಯ ಶಂಕ್ರಣ್ಣ

ಶಂಕರ್ ನಾಗ್ ಮೂಲ ಹೆಸರು ನಾಗರಕಟ್ಟೆ ಶಂಕರ್. 9 ನವೆಂಬರ್ 1954 ರಲ್ಲಿ ಹೊನ್ನಾವರ ತಾಲೂಕಿನ ಮಲ್ಲಾಪುರ ಎಂಬ ಗ್ರಾಮದಲ್ಲಿ ಜನಿಸಿದ ಶಂಕರ್​ನಾಗ್, ಬಾಲ್ಯದಲ್ಲೇ ಬಹಳ ಚುರುಕಾಗಿದ್ದರು. ಅವರ ತಂದೆ ತಾಯಿ ಪ್ರೀತಿಯಿಂದ ಮಗನನ್ನು ಭವಾನಿ ಶಂಕರ ಎಂದು ಕರೆಯುತ್ತಿದ್ದರು. ಅಣ್ಣ ಅನಂತ್​​ ನಾಗ್ ಅವರೊಂದಿಗೆ ನಾಟಕಗಳನ್ನು ನೋಡಲು ತೆರಳುತ್ತಿದ್ದ ಶಂಕರ್​​ ನಾಗ್, ಅಣ್ಣನ ಒತ್ತಾಯದ ಮೇರೆಗೆ ತಾವೂ ಕೂಡಾ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿಯಾದರು. ಅಣ್ಣ-ತಮ್ಮ ಇಬ್ಬರೂ ಬ್ಯಾಂಕ್​ ನೌಕರರಾಗಿದ್ದರೂ ಅದರ ಜೊತೆಗೆ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು.

ಅಣ್ಣ ಅನಂತ್​ ನಾಗ್ ಜೊತೆಗೆ

ಸ್ನೇಹಿತರೊಂದಿಗೆ ವಿದೇಶಕ್ಕೆ ತೆರಳಬೇಕು ಎಂದುಕೊಂಡಿದ್ದ ಶಂಕರ್​ ನಾಗ್​​​ಗೆ ಗಿರೀಶ್ ಕಾರ್ನಾಡ್​ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸುವ ಅವಕಾಶ ದೊರೆಯಿತು. ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದ ಶಂಕರ್ ​ನಾಗ್​ಗೆ ಒಂದರ ಹಿಂದೊಂದರಂತೆ ಸಿನಿಮಾಗಳು ಹುಡುಕಿ ಬಂದವು. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನಕ್ಕೂ ಇಳಿದ ಶಂಕರ್​ ನಾಗ್ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಜನ್ಮಜನ್ಮದ ಅನುಬಂಧ, ಗೀತಾ, ಮಿಂಚಿನ ಓಟ ಸಿನಿಮಾಗಳನ್ನು ನಿರ್ಮಾಣ ಕೂಡಾ ಮಾಡಿದರು.

ಡಾ. ರಾಜ್​​ಕುಮಾರ್ ಜೊತೆ

ಆರ್​.ಕೆ. ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕಾದಂಬರಿಯನ್ನು ಮೂಲ ಹೆಸರಿನಲ್ಲೇ ಧಾರಾವಾಹಿಯಾಗಿ ನಿರ್ಮಿಸಿದ ಶಂಕರ್ ​​ನಾಗ್ ಈ ಧಾರಾವಾಹಿ ಮೂಲಕ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದರು. 1987 ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ, ಹಿಂದಿ ಹಾಗೂ ಇಂಗ್ಲೀಷ್​​ನಲ್ಲಿ ಪ್ರಸಾರವಾಯ್ತು. ಕನ್ನಡಕ್ಕೂ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರ ಕೂಡಾ ಆಗಿದೆ. ಕನ್ನಡ ಕಲಾವಿದರೇ ನಟಿಸಿದ್ದ ಈ ಧಾರಾವಾಹಿಯನ್ನು ಕರ್ನಾಟಕದ ಶಿವಮೊಗ್ಗ, ಆಗುಂಬೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಡಾ. ವಿಷ್ಣುವರ್ಧನ್ ಜೊತೆ

ರಂಗಭೂಮಿ ಕಲಾವಿದೆ ಅರುಂಧತಿ ನಾಗ್ ಅವರನ್ನು ಪ್ರೀತಿಸಿ ಮದುವೆಯಾದ ಶಂಕರ್ ​ನಾಗ್, ಪತ್ನಿಯೊಂದಿಗೆ ಸೇರಿ 'ಸಂಕೇತ್' ಎಂಬ ಹವ್ಯಾಸಿ ರಂಗಭೂಮಿ ತಂಡವನ್ನು ಕಟ್ಟಿ ಅನೇಕ ನಾಟಕಗಳನ್ನು ಪ್ರದರ್ಶಿಸಿದರು. ಈ ದಂಪತಿಗೆ ಕಾವ್ಯ ಎಂಬ ಪುತ್ರಿ ಇದ್ದಾರೆ. ಶಂಕರ್​ ನಾಗ್ ನಿಧನದ ನಂತರ ಅರುಂಧತಿ ನಾಗ್ 'ರಂಗಶಂಕರ' ಎಂಬ ರಂಗಮಂದಿರವನ್ನು ಸ್ಥಾಪಿಸಿದರು. 'ಆಟೋರಾಜ' ಚಿತ್ರದ ಮೂಲಕ ಶಂಕರ್​ ನಾಗ್​ ಆಟೋ ಚಾಲಕರ ಮೆಚ್ಚಿನ ನಟನಾದರು. ಇಂದಿಗೂ ಕೂಡಾ ಬಹುತೇಕ ಆಟೋಗಳಲ್ಲಿ ಶಂಕರ್ ​​ನಾಗ್ ಫೋಟೋಗಳನ್ನು ಕಾಣಬಹುದು.

ಮಾಲ್ಗುಡಿ ಡೇಸ್ (ಫೋಟೋ ಕೃಪೆ: ಜೀ ಕನ್ನಡ)

ಶಂಕರ್​ ನಾಗ್ ಅಭಿನಯದ ಕೊನೆಯ ಚಿತ್ರ 'ನಿಗೂಢ ರಹಸ್ಯ'. ಕನ್ನಡ ಚಿತ್ರರಂಗದ ಅಭಿವೃದ್ಧಿ ಬಗ್ಗೆ ದೊಡ್ಡ ಮಟ್ಟಿನ ಕನಸು ಕಂಡಿದ್ದ ಶಂಕರ್ ​ನಾಗ್ ಅದನ್ನು ಕಾರ್ಯರೂಪಕ್ಕೆ ತರುವಷ್ಟರಲ್ಲೇ ನಿಧನರಾದರು. 30 ಸೆಪ್ಟೆಂಬರ್​ 1990 ದಾವಣಗೆರೆ ಬಳಿ ಶಂಕರ್ ​​​​​​ನಾಗ್ ಚಲಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿ ನಮ್ಮೆಲ್ಲರ ಪ್ರೀತಿಯ ಶಂಕ್ರಣ್ಣ ಕೊನೆಯುಸಿರೆಳೆದರು. ಶಂಕರ್​​​ ನಾಗ್ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಕನ್ನಡ ಕಲಾಭಿಮಾನಿಗಳ ಹೃದಯದಲ್ಲಿ ಸದಾ ಹಸಿರಾಗಿರುತ್ತಾರೆ.

ರಂಗ ಶಂಕರ
Last Updated : Jun 29, 2022, 10:38 AM IST

ABOUT THE AUTHOR

...view details