ಕೋವಿಡ್ ಬಳಿಕ ಪ್ರೇಕ್ಷಕರು ವಿಷಯವನ್ನು ನೋಡುವ ವಿಧಾನದಲ್ಲಿ ಬದಲಾವಣೆಯಾಗಿದೆ. ಮೊಬೈಲ್ ಪರದೆ ತುಂಬಾ ಚಿಕ್ಕದಾಗಿದ್ದು, ಅದರಲ್ಲಿ ಸಿನಿಮಾ ನೋಡಿದರೆ ಥಿಯೇಟರ್ ಅನುಭವ ಸಿಗುವುದಿಲ್ಲ. ಒಟಿಟಿ ಸೇರಿದಂತೆ ಯಾವುದೂ ಕೂಡ ಚಿತ್ರದ, ಥಿಯೇಟರ್ಗಳ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರೆಡ್ ಸೀ ಫೆಸ್ಟಿವಲ್ನಲ್ಲಿ ಮಾತನಾಡಿದ ಶಾರುಖ್ ಖಾನ್, 'ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿ ಮೂರು ದಶಕಗಳೇ ಕಳೆದಿವೆ. ಇಂಥ ಎಷ್ಟೋ ವಿಷಯಗಳನ್ನು ನೋಡಿದ್ದೇನೆ. ಟಿವಿಗಳು ಬಂದಾಗ ಟಿವಿ ಬಂತು, ಯಾರು ಥಿಯೇಟರ್ಗಳಲ್ಲಿ ಸಿನಿಮಾ ನೋಡ್ತಾರೆ ಅಂದರು. ವಿಸಿಆರ್‌ಗಳು ಬಂದವು, ಇನ್ನು ಎಲ್ಲಾ ಸಿನಿಮಾಗಳನ್ನು ವಿಸಿಆರ್‌ನಲ್ಲಿ ನೋಡುತ್ತೇವೆ ಎಂದರು. ಆದರೆ ಏನೂ ಬದಲಾಗಿಲ್ಲ. ಸಿನಿಮಾವನ್ನು ಬೆಂಬಲಿಸುವವರು ಮುಂದೆಯೂ ಬೆಂಬಲಿಸುತ್ತಾರೆ. ಸಿನಿಮಾ ರಂಗ ಹೊಸ ನೆಲೆಯನ್ನು ಮುರಿದು ಉತ್ಸಾಹದಿಂದ ಮುಂದೆ ಬರಲಿದೆ. ಹಾಗೆಯೇ ಥಿಯೇಟರ್ನಲ್ಲಿ ಸಿನಿಮಾ ನೋಡಿದರೆ ಔಟಿಂಗ್ ಹೋದಂತೆ ಆಗುತ್ತದೆ, ಆದರೆ ಮೊಬೈಲ್ನಲ್ಲಿ ಹಾಗಾಗುವುದಿಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.