ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಪ್ರತಿಭೆ ಜೊತೆಗೆ ಅದೃಷ್ಟ ಇದ್ದರೆ ಸಾಧನೆ ಶೀಘ್ರ ಸಾಧ್ಯ ಅನ್ನೋದಕ್ಕೆ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಖ್ಯಾತಿಯ ರಂಜನ್ ಉದಾಹರಣೆ. ಈ ಚಿತ್ರದಲ್ಲಿ ದಡ್ಡ ಪ್ರವೀಣ ಪಾತ್ರ ಮಾಡಿ ಕನ್ನಡಿಗರ ಗಮನ ಸೆಳೆದಿದ್ದ ರಂಜನ್ ಈಗ ಸ್ಕ್ಯಾಮ್ ಮಾಡೋದಕ್ಕೆ ರೆಡಿಯಾಗಿದ್ದಾರೆ.
SCAM 1770 ಪೋಸ್ಟರ್ ರಿಲೀಸ್:ಇಂದಿನ ವಿದ್ಯಾರ್ಥಿಗಳೇ ಮುಂದಿನ ಪ್ರಜೆಗಳು ಎಂಬ ಮಾತಿದೆ. ಅದಕ್ಕೆ ಅನುಗುಣವಾಗಿ ಈಗಿನ ಶಿಕ್ಷಣ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಕುರಿತಾದ ಕಥಾಹಂದರ ಹೊಂದಿರುವ "SCAM 1770" (ಸ್ಕ್ಯಾಮ್ 1770) ಚಿತ್ರ ಮೂಡಿ ಬರುತ್ತಿದೆ. ವಿಕಾಸ್ ಪುಷ್ಪಗಿರಿ ನಿರ್ದೇಶಿಸಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿ ವೀಕ್ಷಕರ ಗಮನ ಸೆಳೆಯುತ್ತಿದೆ.
ಪೋಸ್ಟರ್ ಅನಾವರಣಗೊಳಿಸಿದ ವಿದ್ಯಾರ್ಥಿಗಳು: ಬೆಂಗಳೂರು ನಗರದ ಆಟದ ಮೈದಾನವೊಂದರಲ್ಲಿ ಸುಮಾರು 20 ತಂಡಗಳು ಭಾಗವಹಿಸಿರುವ ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿದೆ. ಆ ತಂಡಗಳ ನಾಯಕ ವಿದ್ಯಾರ್ಥಿಗಳು "SCAM 1770" ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.
ಶಿಕ್ಷಣ ವ್ಯವಸ್ಥೆ ಕಥೆಯನ್ನಾಧರಿಸಿದ ಸಿನಿಮಾ: ಇದೊಂದು ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆಧಾರಿತ ಚಿತ್ರ. ಸತ್ಯ ಘಟನೆಗಳನ್ನು ಕಟ್ಟಿಕೊಂಡು, ವಾಸ್ತವದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬ ವಿಚಾರವನ್ನು ಇಟ್ಟುಕೊಂಡು ಮಾಡಿರುವ ಸಿನಿಮಾವೇ SCAM 1770. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಣ ಸಂಸ್ಥೆ ನಡೆಸುತ್ತಿರುವವರು ನೋಡಲೇಬೇಕಾದ ಚಿತ್ರವಿದು ಎಂದು ನಿರ್ದೇಶಕ ವಿಕಾಸ್ ಪುಷ್ಪಗಿರಿ ತಿಳಿಸಿದ್ದಾರೆ.