ಕೊರೊನಾ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಕಾರ್ಮಿಕರ ವೇತನ ಪರಿಷ್ಕರಣೆಗೆ ಕೊನೆಗೂ ಒಪ್ಪಿಗೆ ಸಿಕ್ಕಿದೆ. ನಿರ್ಮಾಪಕ ಹಾಗೂ ಚಲನಚಿತ್ರ ಕಾರ್ಮಿಕರ ಅಧ್ಯಕ್ಷರಾಗಿ ಕೆ.ಮಂಜು ನೇತೃತ್ವದಲ್ಲಿ 36ಕ್ಕೂ ಹೆಚ್ಚು ನಿರ್ಮಾಪಕರನ್ನು ಒಳಗೊಂಡ ಸಿನಿಮಾ ಕಾರ್ಮಿಕರ ವೇತನ ಪರಿಷ್ಕರಣೆ ಸಮಿತಿಯಿಂದ ಹೊಸ ವೇತನ ವರದಿಯನ್ನು ರೂಪಿಸಲಾಗಿದ್ದು, ಸಮಿತಿ ಸೂಚಿಸಿರುವ ವರದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಸಂಪೂರ್ಣವಾಗಿ ಸಮ್ಮತಿಸಿದೆ.
ಆ ಮೂಲಕ ನಿರ್ಮಾಪಕರಿಗೆ ಹೊರೆ ಅನಿಸಿದರೂ, ಚಿತ್ರೋದ್ಯಮ ಕುಟುಂಬದ ಸದಸ್ಯರಾಗಿರುವ ಸಿನಿಮಾ ಕಾರ್ಮಿಕರಿಗೆ ಒಳ್ಳೆಯದಾಗಬೇಕು ಎನ್ನುವ ಆಲೋಚನೆಯಲ್ಲಿ ಕಾರ್ಮಿಕರ ಎಲ್ಲಾ ಬೇಡಿಕೆಗಳನ್ನು ಒಳಗೊಂಡಂತೆಯೇ ಹೊಸ ವೇತನ ಪರಿಷ್ಕರಣೆ ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ, ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್, ಪ್ರಮೀಳಾ ಜೋಷಾಯ್, ನರಸಿಂಹಲು, ಭಾ.ಮ ಗಿರೀಶ್, ನಿರ್ಮಾಪಕರಾದ ಉಮೇಶ್ ಬಣಕಾರ್, ಪ್ರವೀಣ್ ಕುಮಾರ್ ಸಮ್ಮುಖದಲ್ಲಿ ಕೆ.ಮಂಜು ಸಿನಿಮಾ ಕಾರ್ಮಿಕರಿಗಾಗಿ ರೂಪಿಸಿರುವ ಹೊಸ ವೇತನದ ಕುರಿತು ಮಾಹಿತಿ ಹಂಚಿಕೊಂಡರು.
ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್ ಮಾತನಾಡಿ, "36ಕ್ಕೂ ಹೆಚ್ಚು ನಿರ್ಮಾಪಕರನ್ನು ಒಳಗೊಂಡ ವೇತನ ಪರಿಷ್ಕರಣೆ ಸಮಿತಿಯನ್ನು ನಿರ್ಮಾಪಕ ಕೆ.ಮಂಜು ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಮೂರು ತಿಂಗಳುಗಳ ಕಾಲ ಹಲವು ಹಂತಗಳಲ್ಲಿ ಸಭೆಗಳನ್ನು ನಡೆಸುವ ಜೊತೆಗೆ ಹಲವರ ಅಭಿಪ್ರಾಯಗಳನ್ನು ಸಂಗ್ರಹಿಸಿ ನೀಡಿರುವ ವೇತನ ಪರಿಷ್ಕರಣಾ ವರದಿಯನ್ನು ತಯಾರು ಮಾಡಲಾಗಿದೆ" ಎಂದು ತಿಳಿಸಿದರು.
"ರಜೆ ಹಾಗೂ ಹಬ್ಬದ ದಿನಗಳಲ್ಲಿ ಕೆಲಸ ಮಾಡಿದರೆ ಸಂಬಳದ (ದಿನದ ವೇತನ) ಜತೆಗೆ ಹೆಚ್ಚುವರಿ ಕೆಲಸದ ಬಾಟಾ (ದಿನದ ಕೂಲಿ), ಪ್ರಯಾಣದ ಬಾಟಾ ವೇತನದಲ್ಲಿ ಅರ್ಧ ಮಾತ್ರ ಕಡಿತ ಮಾಡಲಾಗಿದೆ. ಆದರೂ ಪೂರ್ತಿ ಬಾಟಾ ಕೋಡಲೇಬೇಕು ಎಂದು ಪಟ್ಟು ಹಿಡಿದಿರುವುದು ಸರಿಯಲ್ಲ. ದಿನದ ವೇತನದ ಜತೆಗೆ ಪೂರ್ತಿ ಹೆಚ್ಚುವರಿ ಬಾಟಾ ಬದಲು ಅರ್ಧ ಕೂಲಿ ಕೊಡಲು ಸಮಿತಿ ಸೂಚಿಸಿದೆ. ನಿರ್ಮಾಪಕರಿಗೆ ಸ್ವಲ್ಪ ಹೊರೆಯಾದರೂ ನಿರ್ಮಾಪಕರು ಈ ಹೊಸ ವೇತನಕ್ಕೆ ಒಪ್ಪಿಕೊಂಡಿದ್ದಾರೆ" ಎಂದರು.
"ಆದರೂ ಕೆಲವರು ದಿನದ ಬಾಟಾದಲ್ಲಿ ಕಡಿತ ಮಾಡಿದ್ದಾರೆ ಎಂದು ನೆಪವೊಡ್ಡಿ ಹೊಸ ವೇತನಕ್ಕೆ ವಿರೋಧ ಮಾಡುತ್ತಿದ್ದಾರೆ. ಜತೆಗೆ ಶೂಟಿಂಗ್‌ನಲ್ಲಿರುವ ಸಿನಿಮಾಗಳ ಕೆಲಸಗಳನ್ನು ನಿಲ್ಲಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಇದು ಸರಿಯಾದ ನಡೆ ಅಲ್ಲ. ಒಂದು ವೇಳೆ ಈ ಬೆದರಿಕೆ ವರ್ತನೆಗಳು ಮುಂದುವರಿದರೆ, ಕಾನೂನು ವ್ಯಾಪ್ತಿಯ ಜತೆಗೆ ಚಿತ್ರರಂಗದ ನಿಯಮಗಳ ಪ್ರಕಾರ ನಾವೂ ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ಎಚ್ಚರಿಕೆ ನೀಡಿದರು.