ಸ್ಯಾಂಡಲ್ವುಡ್ ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರು ಅನೇಕ ಸಿನಿಮಾಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಅವರ ಪುತ್ರ ರಾಜವರ್ಧನ್ ಕೂಡ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿದ್ದಾರೆ. ನಾಯಕನಾಗಿ ರಾಜವರ್ಧನ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರತಿ ಚಿತ್ರದಲ್ಲೂ ಬೇರೆ ಬೇರೆ ಪಾತ್ರಗಳಿಗೆ ಬಣ್ಣ ಹಚ್ಚುವ ಅವರ ಕೈಯಲ್ಲಿ ಸದ್ಯ ಹಲವು ಪ್ರಾಜೆಕ್ಟ್ಗಳಿವೆ.
ಅವುಗಳಲ್ಲಿ 'ಗಜರಾಮ' ಕೂಡ ಒಂದು. ಈ ಚಿತ್ರದ ಕೆಲಸಗಳು ಭರದಿಂದ ಸಾಗುತ್ತಿದೆ. ಫಸ್ಟ್ ಲುಕ್ನಿಂದ ಗಮನ ಸೆಳೆಯುತ್ತಿರುವ ಗಜರಾಮನ ಸ್ಪೆಷಲ್ ಹಾಡಿನ ಚಿತ್ರೀಕರಣ ಚಿಕ್ಕಗುಬ್ಬಿಯಲ್ಲಿ ನಡೆದಿದೆ. ಝಗಮಗಿಸುವ ಸೆಟ್ನಲ್ಲಿ ಧನು ಮಾಸ್ಟರ್ ಕೊರಿಯೋಗ್ರಾಫಿಯಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜೊತೆ ರಾಜವರ್ಧನ್ ಹೆಜ್ಜೆ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಗಿಣಿ ದ್ವಿವೇದಿ, "ಹೊಸ ಹೊಸ ಪ್ರಯತ್ನಗಳು ನಮ್ಮ ಇಂಡಸ್ಟ್ರಿಯಲ್ಲಿ ಆಗಬೇಕು. ಕನ್ನಡ ಸಿನಿಮಾಗಳು ಒಳ್ಳೆ ರೀತಿಯಲ್ಲಿ ಬೆಳೆಯುತ್ತಿವೆ. ಅದನ್ನು ನೋಡಿ ಹೆಮ್ಮೆ ಅನಿಸುತ್ತದೆ. ನಾನು ಎಲ್ಲೇ ಹೋದರೂ ಕರ್ನಾಟಕ ನನ್ನ ಮನೆಯ ತರ. ಗಜರಾಮ ಸಿನಿಮಾದಲ್ಲಿ ನನಗಾಗಿ ಮಾಡಿರುವ ಸ್ಪೆಷಲ್ ಸಾಂಗ್ ಇದೆ. ರಾಜ್ ಅದ್ಭುತ ನಟ, ಮನೋಮೂರ್ತಿ ಸರ್ ಮ್ಯೂಸಿಕ್, ಧನು ಕೊರಿಯೋಗ್ರಫಿ ಎಲ್ಲವೂ ಸೇರಿ ಈ ವರ್ಷದ ಹಿಟ್ ಹಾಡುಗಳಲ್ಲಿ ಒಂದಾಗಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಳಿಕ ನಟ ರಾಜವರ್ಧನ್ ಮಾತನಾಡಿ, "ಈ ಸಿನಿಮಾ ಒಂದು ವರ್ಷದ ಜರ್ನಿ. ಲೈಫ್ ಲೈನ್ ಪಿಕ್ಚರ್ಸ್ ಜೊತೆ ಮಾಡುತ್ತಿರುವ ಮೊದಲ ಚಿತ್ರ ಇದು. ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ. ಸುನಿಲ್ ಮುಂದಿನ ದಿನಗಳಲ್ಲಿ ಮಾಸ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಬರುತ್ತಾರೆ. ರಾಗಿಣಿ ಮೇಡಂ ಕಾಲೇಜ್ ಡೇಸ್ನಿಂದ ನನ್ನ ಕ್ರಶ್. ಈಗ ಅವರೊಂದಿಗೆ ವರ್ಕ್ ಮಾಡುವ ಅವಕಾಶ ಸಿಕ್ಕಿದೆ. ಡ್ರೀಮ್ ಕಂಪ್ಲೀಟ್ ಆಗಿದೆ. ಮನೋ ಸರ್ ಮೆಲೋಡಿ ಕಿಂಗ್. ಈಗ ಮಾಸ್ ಕಿಂಗ್ ಆಗಿದ್ದಾರೆ. ನಮ್ಮ ಕಥೆಗೆ ಹೇಗೆ ಬೇಕೋ ಹಾಗಿದ್ದಾರೆ ಹೀರೋಯಿನ್. ರಾಮ್ ನನ್ನ ಪಾತ್ರ. ರಾಮ ರಾವಣ ಎರಡು ನಾನೇ. ತುಂಬಾ ಒಳ್ಳೆ ಆರ್ಟಿಸ್ಟ್ ಚಿತ್ರದಲ್ಲಿದ್ದಾರೆ" ಎಂದು ಹೇಳಿದರು.
"ಬೆಂಗಳೂರು, ಮೈಸೂರು, ಮಂಡ್ಯ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಇವತ್ತು ಕೊನೆಯ ದಿನ. ರಾಜವರ್ಧನ್ ಸರ್ ತುಂಬಾ ಬದ್ಧತೆಯಿಂದ ಕೆಲಸ ಮಾಡಿದ್ದಾರೆ. ನಿರ್ಮಾಪಕರು ಬಜೆಟ್ ಕೇಳದೇ ಸಿನಿಮಾ ಮಾಡಿದ್ದಾರೆ. ಮನೋಮೂರ್ತಿ ಸರ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ. ಸಾಂಗ್ ಕೇಳಿದ ತಕ್ಷಣ ರಾಗಿಣಿ ಮೇಡಂ ಒಪ್ಪಿಕೊಂಡರು" - ನಿರ್ದೇಶಕ ಸುನಿಲ್ ಕುಮಾರ್
"ಸಿನಿಮಾಗೆ ಕುಂಬಳಕಾಯಿ ಮೂಹೂರ್ತ ಆದಾಗ ಎಷ್ಟು ಖುಷಿ ಆಗಿತ್ತೋ, ಈಗ ಅಷ್ಟೇ ಖುಷಿಯಾಗುತ್ತಿದೆ. ಮನೋ ಸರ್ಗೆ ತುಂಬಾ ಕಾಟ ಕೊಟ್ಟು ಸಾಂಗ್ ಮಾಡಿಸಿದ್ದೇವೆ. ಧನು ಮಾಸ್ಟರ್ ಈ ಹಾಡನ್ನು ಕೊನೆಯಲಿ ಮಾಡೋಣ ಎಂದರು. ಒಳ್ಳೆ ಔಟ್ಪುಟ್ ಬಂದಿದೆ. ನವೆಂಬರ್ ಅಥವಾ ಡಿಸೆಂಬರ್ನಲ್ಲಿ ಸಿನಿಮಾ ತೆರೆಗೆ ಬರುವ ಪ್ರಯತ್ನ ಮಾಡುತ್ತೇವೆ" - ನಿರ್ಮಾಪಕ ನರಸಿಂಹಮೂರ್ತಿ