ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಗಾಯಕ ನಿಕ್ ಜೋನಾಸ್ ಸಿನಿಮಾ ರಂಗದ ಪವರ್ಫುಲ್ ಕಪಲ್. ಈ ಜೋಡಿ ದಾಂಪತ್ಯ ಜೀವನ ಆರಂಭಿಸಿದ ವೇಳೆ ತಮ್ಮ ವಯಸ್ಸಿನ ಅಂತರದ ವಿಷಯವಾಗಿ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಟೀಕೆ, ಟ್ರೋಲ್ಗಳನ್ನು ಲೆಕ್ಕಿಸದೇ ಸುಖಸಂಸಾರ ನಡೆಸುತ್ತಿದ್ದಾರೆ ಈ ಸೆಲೆಬ್ರಿಟಿ ಜೋಡಿ. ಕ್ಯಾಮರಾಗಳ ಎದುರು ಮಾದರಿ ದಂಪತಿಯಂತೆ ಕಾಣುವ ಇವರು ಅದೆಷ್ಟೋ ಮಂದಿಗೆ ಸ್ಫೂರ್ತಿ. ಸಂಗೀತ, ಸಿನಿಮಾ ಈವೆಂಟ್ಗಳಲ್ಲಿ ಪರಸ್ಪರ ಸಹಕಾರ, ಗೌರವ, ಪ್ರೀತಿಯಿಂದ ಇರುವುದು ಅಭಿಮಾನಿಗಳ ಮನ ಗೆಲ್ಲುತ್ತದೆ.
ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ, ಗಾಯಕ ನಿಕ್ ಜೋನಾಸ್ ರೋಮ್‌ನಲ್ಲಿ ನಡೆದ ಸಿಟಾಡೆಲ್ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಸೆಲೆಬ್ರಿಟಿ ದಂಪತಿ ಸ್ಥಳಕ್ಕೆ ಪ್ರವೇಶಿಸುವ ಮತ್ತು ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ನೀಡುತ್ತಿರುವ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಪ್ರಿಯಾಂಕಾ ಮತ್ತು ನಿಕ್ ಜೊತೆಗೆ, ರಿಚರ್ಡ್ ಮ್ಯಾಡೆನ್, ಸ್ಟಾನ್ಲಿ ಟುಸ್ಸಿ ಸೇರಿದಂತೆ ಸಿಟಾಡೆಲ್‌ನ ಕಲಾವಿದರು ಸಹ ವಿಶೇಷ ಪ್ರದರ್ಶನದಲ್ಲಿ ಉಪಸ್ಥಿತರಿದ್ದರು. 'ಸಿಟಾಡೆಲ್' ಪ್ರಿಯಾಂಕಾ ಚೋಪ್ರಾ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಸೀರಿಸ್.
ಈವೆಂಟ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಗ್ರೀನ್ ಮಾಡರ್ನ್ ಡ್ರೆಸ್ ಧರಿಸಿದ್ದು, ನಿಕ್ ಜೋನಾಸ್ ಬ್ಲೂ ಸೂಟ್ ಆಯ್ಕೆ ಮಾಡಿಕೊಂಡಿದ್ದರು. ಸ್ಟಾರ್ ದಂಪತಿ ಪರಸ್ಪರ ಕೈಗಳನ್ನು ಹಿಡಿದು ಈವೆಂಟ್ಗೆ ಪ್ರವೇಶಿಸಿದರು. ನಂತರ ಪಾಪರಾಜಿಗಳತ್ತ ಕೈ ಬೀಸಿದರು. ಸಮಾರಂಭದಲ್ಲಿ ಇಬ್ಬರೂ ಫೋಟೋಗಳಿಗೆ ಪೋಸ್ ಕೂಡ ನೀಡಿದ್ದಾರೆ.
ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಪ್ರಿಯಾಂಕಾ ಅವರು ನಗುಮೊಗದಲ್ಲಿ ಪಾಪರಾಜಿಗಳಿಗೆ ಕೈ ಮುಗಿದು, ನಮಸ್ತೆ ಎಂದು ಹೇಳುತ್ತಿರುವುದನ್ನು ಕಾಣಬಹುದು. ಈವೆಂಟ್‌ನ ಮತ್ತೊಂದು ವಿಡಿಯೋದಲ್ಲಿ, ಪ್ರಿಯಾಂಕಾ ಪಾಪರಾಜಿಗಳಿಗೆ ಪೋಸ್ ಕೊಡುತ್ತಿದ್ದರು. ನಿಕ್ ದೂರದಲ್ಲಿ ನಿಂತುಕೊಂಡು ಪ್ರಿಯಾಂಕಾ ಅವರ ಫೋಟೋಗಳನ್ನು ಕ್ಲಿಕ್ಕಿಸುತ್ತಿದ್ದರು. ಈ ವಿಡಿಯೋ ಅಭಿಮಾನಿಗಳ ಮನ ಕದ್ದಿದ್ದು, ಸಖತ್ ವೈರಲ್ ಆಗುತ್ತಿದೆ. ಪ್ರಿಯಾಂಕಾ ಸಿಟಾಡೆಲ್ ನಟರೊಂದಿಗೂ ಫೋಟೋಗಳಿಗೆ ಪೋಸ್ ನೀಡಿದರು.