ಕನ್ನಡ ಚಿತ್ರರಂಗದ ರಾಜಕುಮಾರ, ನಗುಮೊಗದ ಒಡೆಯ ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಮೃತಪಟ್ಟು ಎರಡು ವರ್ಷ ಕಳೆಯುತ್ತಿದೆ. ಬಾಲ್ಯದಲ್ಲೇ ಸಿನಿಮಾ ಲೋಕ ಪ್ರವೇಶಿಸಿದ ಅಪ್ಪು, ಜನರಿಗೆ ಮನರಂಜನೆಯ ಔತಣವನ್ನೇ ಉಣಬಡಿಸಿದ್ದರು. ಎರಡನೇ ವರುಷದ ಪುಣ್ಯಸ್ಮರಣೆಯ ಈ ಸಂದರ್ಭದಲ್ಲಿ ಸಾಮಾಜಿಕ ಸಂದೇಶ ಸಾರುವ ಅವರ ನಟನೆಯ ಚಿತ್ರಗಳ ಮೆಲುಕು ನೋಟ.
ಮೈತ್ರಿ: 2015ರಲ್ಲಿ ತೆರೆಕಂಡ 'ಮೈತ್ರಿ' ಚಿತ್ರ ಸಮಾಜಮುಖಿ ಸಿನಿಮಾಗಳ ಪೈಕಿ ಒಂದು. ಗಿರಿರಾಜ್ ನಿರ್ದೇಶನದ ಚಿತ್ರದಲ್ಲಿ ಅಪ್ಪು ಅಭಿನಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಬಡತನದಿಂದ ಬಂದ ಹುಡುಗನೊಬ್ಬ ಸಮಾಜದ ದುಷ್ಟಶಕ್ತಿಗಳ ಪ್ರಭಾವಕ್ಕೆ ಸಿಲುಕಿ, ರಿಮ್ಯಾಂಡ್ ಹೋಮ್ ಸೇರಿರುವವನ ಕಥೆ ಇದು.
ರಾಜಕುಮಾರ: 2017ರಲ್ಲಿ ತೆರೆಕಂಡ 'ರಾಜಕುಮಾರ' ಕೂಡಾ ಸದಭಿರುಚಿಯ ಸಿನಿಮಾ. ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರ ಪೋಷಕರನ್ನು ಮಕ್ಕಳು ಅನಾಥಾಶ್ರಮಗಳಿಗೆ ಸೇರಿಸುವ ಕಥಾನಕ ಹೊಂದಿತ್ತು. ವಯಸ್ಸಾದ ಮೇಲೆ ತಂದೆ ತಾಯಿಯನ್ನು ಅನಾಥಾಶ್ರಮಕ್ಕೆ ಸೇರಿಸಬೇಡಿ ಎಂಬ ಸಂದೇಶವಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು.
ಇದನ್ನೂ ಓದಿ:ಸುಮುಖಗೆ ಹಿಮಾಲಯದಲ್ಲಿ ಅಪ್ಪು ನಗುವಿನ ದರ್ಶನ; ಭಾವುಕರಾದ ನಟ
ಯುವರತ್ನ: ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ ಸಿನಿಮಾ 'ಯುವರತ್ನ'. ವಿದ್ಯಾರ್ಥಿಗಳಿಗೆ ಪೂರೈಕೆ ಆಗುತ್ತಿದ್ದ ಡ್ರಗ್ಸ್ ಕುರಿತು ಸಿನಿಮಾ ಮಾತನಾಡಿತ್ತು. ಸರ್ಕಾರಿ ಕಾಲೇಜುಗಳ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನಾಧರಿಸಿ ನಿರ್ಮಿಸಿದ ಚಿತ್ರವಿದು. ಶಿಕ್ಷಕನ ಪಾತ್ರದಲ್ಲಿ ಪುನೀತ್ ಮನೋಜ್ಞವಾಗಿ ಅಭಿನಯಿಸಿದ್ದರು.
ಪೃಥ್ವಿ: ಅಪ್ಪು ಮೊದಲ ಬಾರಿ ಐಎಎಸ್ ಅಧಿಕಾರಿಯಾಗಿ ನಟಿಸಿದ್ದ ಚಿತ್ರ 'ಪೃಥ್ವಿ'. ಬಳ್ಳಾರಿ ಗಣಿದಣಿಗಳ ವಿರುದ್ಧ ಹೋರಾಟ ನಡೆಸುವ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಪರೀತ ಬಿಸಿಲು, ಧೂಳಿನಿಂದ ಕೂಡಿದ ವಾತಾವರಣ, ಎಲ್ಲೆಲ್ಲೂ ಜೆಸಿಬಿ, ಲಾರಿಗಳ ಓಡಾಟ, ಚಾಲಕರ ದರ್ಪ, ರಾಜಕಾರಣಿಗಳ ಮದವೇರಿದ ಮಾತುಗಳು, ಇಂತಹ ವಾತಾವರಣದಲ್ಲಿ ನ್ಯಾಯಕ್ಕಾಗಿ ಹೋರಾಡುವ ಜಿಲ್ಲಾಧಿಕಾರಿ ಎದುರಿಸುವ ಸಂಕಟವೇ ಚಿತ್ರದ ಹೂರಣ.
ಆಕಾಶ್: ಪವರ್ ಸ್ಟಾರ್ ವೃತ್ತಿಜೀವನದ ಆರಂಭದಲ್ಲಿ ಅಭಿನಯಿಸಿದ 'ಆಕಾಶ್' ಸಿನಿಮಾ ಕೂಡ ಸಾಮಾಜಿಕ ಸಂದೇಶ ಹೊತ್ತು ಬಂದಿತ್ತು. ಅಪ್ಪು ಕೊನೆಯ ಚಿತ್ರವೇ 'ಜೇಮ್ಸ್'. ಇದರಲ್ಲಿ ಯೋಧನ ಪಾತ್ರದಲ್ಲಿ ಅಭಿಮಾನಿಗಳ ಮನಸ್ಸು ಗೆದ್ದರು. ಅಂತರರಾಷ್ಟ್ರೀಯ ಡ್ರಗ್ ಮಾಫಿಯಾವನ್ನು ಮಟ್ಟ ಹಾಕುವುದು ಜೇಮ್ಸ್ ತಿರುಳು.
ಗಂಧದ ಗುಡಿ:ಪುನೀತ್ ರಾಜ್‌ಕುಮಾರ್ ಕೊನೆಯ ಚಿತ್ರ 'ಗಂಧದ ಗುಡಿ'. ಕರುನಾಡಿನ ವನ್ಯಜೀವಿ, ಪ್ರಾಕೃತಿಕ ಸಂಪತ್ತನ್ನು ಬಿಂಬಿಸಿದ ಆಕರ್ಷಕ ಸಾಕ್ಷ್ಯ ಚಿತ್ರವಿದು. ಹೀಗೆ ಮನರಂಜನೆಯ ಜೊತೆಜೊತೆಗೆ ಸಮಾಜಕ್ಕೆ ಒಳ್ಳೊಳ್ಳೆಯ ಸಂದೇಶ ಸಾರುವ ಸಿನಿಮಾಗಳ ಮೂಲಕ ಈಗಲೂ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಹೃದಯಲ್ಲಿ ರಿಯಲ್ ಹೀರೋ ಆಗಿ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ:ಅಪ್ಪು ನಮ್ಮನ್ನಗಲಿ 2 ವರ್ಷ; ರಾಜ್ ಕುಟುಂಬದಿಂದ 'ಪರಮಾತ್ಮ'ನ ಸ್ಮಾರಕ ನಿರ್ಮಾಣ