2022ರ ಸೂಪರ್ ಹಿಟ್ ಸಿನಿಮಾ 'ಆರ್ಆರ್ಆರ್'ನ ನಾಟು ನಾಟು ಹಾಡಿನ ಮೂಲಕ ಆಸ್ಕರ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿರುವ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಮತ್ತೆ ತಮಿಳು ಸಿನಿಮಾ ರಂಗಕ್ಕೆ ಹಾರಿದ್ದಾರೆ. ಈಗಾಗಲೇ ಕೆಲ ತಮಿಳು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕೀರವಾಣಿ ಮತ್ತೆ ತಮಿಳು ಸಿನಿಮಾಗೆ ಸಂಗೀತ ನೀಡಲು ಸಜ್ಜಾಗಿದ್ದಾರೆ.
ಈ ಹಿಂದೆ 'ಜಂಟಲ್ಮ್ಯಾನ್', 'ಕಾದಲ್ ದೇಶಂ' ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಕೆ.ಟಿ. ಕುಂಜುಮೋನ್ ಅವರು ಬಹಳ ದಿನಗಳ ನಂತರ 'ಜಂಟಲ್ ಮ್ಯಾನ್ 2' ಚಿತ್ರದ ಮೂಲಕ ನಿರ್ಮಾಣಕ್ಕೆ ವಾಪಸಾಗಿದ್ದಾರೆ. ಈ ಜಂಟಲ್ ಮ್ಯಾನ್ 2 ಸಿನಿಮಾದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ಈ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಕ್ಕೆ ಕೀರವಾಣಿ ಒಪ್ಪಿದ್ದಾರೆ.
ಮಾರ್ಚ್ ತಿಂಗಳಲ್ಲಿ ಅಮೆರಿಕದಲ್ಲಿ ನಡೆದ ಸಮಾರಂಭದಲ್ಲಿ ಕೀರವಾಣಿ ಅವರಿಗೆ ವಿಶ್ವದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅಲ್ಲಿಂದ ಭಾರತಕ್ಕೆ ಬಂದ ಮೇಲೆ, ಅವರನ್ನು ಹೈದರಾಬಾದ್ನಲ್ಲಿ ಚಿತ್ರದ ನಿರ್ದೇಶಕ ಎ. ಗೋಕುಲ್ ಕೃಷ್ಣ ಭೇಟಿಯಾಗಿದ್ದರು. ಗೋಕುಲ್ ಹೇಳಿದ ಕಥೆ ಕೇಳಿ ಖುಷಿಯಾದ ಕೀರವಾಣಿ, ತಕ್ಷಣವೇ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ತಕ್ಷಣವೇ ನಿರ್ಮಾಪಕ ಕುಂಜುಮೋನ್ ಅವರಿಗೆ ಕರೆ ಮಾಡಿ, ಮುಂದಿನ ತಿಂಗಳಿನಿಂದ ಸಂಗೀತ ಸಂಯೋಜನೆ ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಚಿತ್ರವು ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.
ಇದನ್ನೂ ಓದಿ:ತಮನ್ನಾ ಭಾಟಿಯಾ ಡೇಟಿಂಗ್ ವದಂತಿ: 'ವಿಜಯ್ ವರ್ಮಾ ಅದೃಷ್ಟವಂತರು' ಎಂದ ಅಭಿಮಾನಿಗಳು
ಭಾರತದ ಸ್ಟಾರ್ ಡೈರೆಕ್ಟರ್ ಎಸ್ಎಸ್ ರಾಜಮೌಳಿ ಅವರ ಬಗ್ಗೆ ವಿಶೇಷವಾಗಿ ಹೇಳಬೇಕೆಂದಿಲ್ಲ. ಅವರ ಹೆಸರು ಹೇಳಿದ ಕೂಡಲೇ ಸಾಗರೋತ್ತರ ಪ್ರದೇಶಗಳ ಮಂದಿ ಕೂಡ ಬಾಹುಬಲಿ, ಆರ್ಆರ್ಆರ್ ಅಂತಲೇ ಹೇಳುತ್ತಾರೆ. 2022ರಲ್ಲಿ ಆರ್ಆರ್ಆರ್, ಕೆಜಿಎಫ್ 2, ಕಾಂತಾರ ಸಿನಿಮಾಗಳು ಬಹಳ ಸದ್ದು ಮಾಡಿದವು. ಇಡೀ ಪ್ರಪಂಚವನ್ನೇ ತನ್ನತ್ತ ಸೆಳೆಯಿತು ಭಾರತೀಯ ಚಿತ್ರರಂಗ. ಅದರಲ್ಲೂ ಆರ್ಆರ್ಆರ್ ಸಿನಿಮಾ ವಿಶ್ವದಾದ್ಯಂತ ವಿಶೇಷ ಮನ್ನಣೆ ಗಳಿಸಿತು. ವಿಶೇಷವಾಗಿ ನಾಟು ನಾಟು ಹಾಡು ಜಗತ್ತಿನಾದ್ಯಂತ ಸದ್ದು ಮಾಡಿ, ಎಲ್ಲರನ್ನೂ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಈ ಮೂಲಕ ನಾಟು ನಾಟು ಹಾಡಿನ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಅವರು ತಮ್ಮ ಜನಪ್ರಿಯತೆಯನ್ನು ಜಗತ್ತಿನಾದ್ಯಂತ ಹೆಚ್ಚಿಸಿಕೊಂಡರು.
ಇದನ್ನೂ ಓದಿ:ರೈಲು ಅಪಘಾತ: ಯಶ್, ಚಿರಂಜೀವಿ, ಜೂ. ಎನ್‌ಟಿಆರ್ ಸೇರಿ ಸೆಲೆಬ್ರಿಟಿಗಳಿಂದ ಸಂತಾಪ!
ಸಾಹಿತಿ ಕೊಡೂರಿ ಶಿವ ಶಕ್ತಿ ದತ್ತ ಅವರ ಪುತ್ರನಾದರೂ ಕೂಡ ಕೀರವಾಣಿಗೆ ಸಾಹಿತ್ಯ ರಂಗಕ್ಕೆ ಬರುವುದು ಸುಲಭವಾಗಿರಲಿಲ್ಲ. ತೆಲುಗು ಸಂಗೀತ ಸಂಯೋಜಕ ಕೆ ಚಕ್ರವರ್ತಿ, ಮಲಯಾಳಂನ ಸಂಗೀತ ಸಂಯೋಜಕ ಸಿ ರಾಜಮಣಿ ಅವರು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಿಗೆ ಸ್ಫೂರ್ತಿಯಾಗಿದ್ದರು. ಸಂಗೀತ ರಂಗದಲ್ಲಿ ಸಾಧಿಸಬೇಕೆಂಬ ಪಣ ತೊಟ್ಟರು. ಅದಕ್ಕೆ ಬೇಕಾದ ಕೆಲಸ ಕೂಡ ಮಾಡಿದರು. ಮನಸು ಮಮತಾ ಸಿನಿಮಾಗೆ ಅವರು ನೀಡಿರುವ ಸಂಗೀತ ಮನ್ನಣೆ ಪಡೆದುಕೊಂಡಿತು. ಆ ನಂತರ ಅವರು ಸಂಜೋಜಿಸಿದ ಅನೇಕ ಹಾಡುಗಳು ಹಿಟ್ ಆದವು. ಸದ್ಯ ನಾಟು ನಾಟು ಮೂಲಕ ಮನೆ ಮಾತಾಗಿದ್ದಾರೆ.