ಭಾರತದ ಅತೀ ದೊಡ್ಡ ಕಾಂಪೋಸಿಟ್ ಅನಿಮೇಷನ್ ಡ್ರಾಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಲವ್ ಯೂ ಶಂಕರ್' ಸಿನಿಮಾದ 'ಓಂ ನಮಃ ಶಿವಾಯ' ಹಾಡನ್ನು ತುಮಕೂರಿನ ಶ್ರೀ ಸಿದ್ಧಗಂಗಾ ಮಠದ ಪರಮಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿಗಳು ಬಿಡುಗಡೆ ಮಾಡಿದ್ದಾರೆ. ಈ ಮೂಲಕ 'ಲವ್ ಯೂ ಶಂಕರ್' ಚಿತ್ರತಂಡಕ್ಕೆ ಮಹಾಸ್ವಾಮೀಜಿಗಳ ಆರ್ಶೀವಾದ ಸಿಕ್ಕಂತಾಗಿದೆ.
ಓಂ ನಮಃ ಶಿವಾಯ ಹಾಡು ಅನಾವರಣ:'ಓಂ ನಮಃ ಶಿವಾಯ' ಹಾಡಿಗೆ ವರ್ಧನ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ. ರಿಲಯನ್ಸ್ ಎಂಟರ್ಟೈನ್ಮೆಂಟ್ ಸ್ಟುಡಿಯೋ ಮತ್ತು ಎಸ್ಡಿ ವರ್ಲ್ಡ್ ಫಿಲಂ ಪ್ರೈವೇಟ್ ಲಿಮಿಟೆಡ್ ಜೊತೆಯಾಗಿ ಅರ್ಪಿಸುತ್ತಿರುವ ಲವ್ ಯೂ ಶಂಕರ್ ಚಿತ್ರವನ್ನು ಜನಪ್ರಿಯ ನಿರ್ದೇಶಕ, ಮೈ ಫ್ರೆಂಡ್ ಗಣೇಶ ಖ್ಯಾತಿಯ ರಾಜೀವ್ ಎಸ್ ರುಯಾ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಶ್ರೇಯಸ್ ತಲಪಾಡೆ, ತನಿಷಾ ಮುಖರ್ಜಿ, ಸಂಜಯ್ ಮಿಶ್ರಾ, ಮನ್ ಗಾಂಧಿ, ಅಭಿಮನ್ಯು ಸಿಂಗ್, ಪ್ರತೀಕ್ ಜೈನ್, ಹೇಮಂತ್ ಪಾಂಡೆ ಸೇರಿದಂತೆ ಮೊದಲಾದವರು ನಟಿಸಿದ್ದಾರೆ.
ವಿಭಿನ್ನ ಕಥಾಹಂದರದ ಸಿನಿಮಾ:ಈ ಸಿನಿಮಾ ತಮ್ಮ ವಿಭಿನ್ನ ಕಥಾಹಂದರ ಮತ್ತು ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಲಿದೆ ಎಂಬುದು ಚಿತ್ರತಂಡದ ವಿಶ್ವಾಸ. ತೇಜಸ್ ದೇಸಾಯಿ ಮತ್ತು ಸುನೀತಾ ದೇಸಾಯಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವರ್ಧನ್ ಸಿಂಗ್ ಮತ್ತು ರಾಮಿರಾ ತನೇಜ ಸಹ - ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.