'ಗುಂಟೂರ್ ಕಾರಂ' ಸೌತ್ ಸಿನಿಮಾ ಇಂಡಸ್ಟ್ರಿಯ ಬಹುನಿರೀಕ್ಷಿತ ಚಿತ್ರ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು, ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದಲ್ಲಿ ಮೂಡಿ ಬರುತ್ತಿರುವ 'ಗುಂಟೂರ್ ಕಾರಂ' ವಿವಿಧ ಕಾರಣಗಳಿಂದಾಗಿ ಸುದ್ದಿಯಲ್ಲಿದೆ. ಕಾಸ್ಟಿಂಗ್, ರಿಲೀಸ್ ಡೇಟ್, ಕಥೆ, ಸಂಗೀತ ನಿರ್ದೇಶಕ ಸೇರಿದಂತೆ ಹಲವು ವಿಷಯಗಳಲ್ಲಿ ಬದಲಾವಣೆ ಮಾಡುತ್ತಾ ಸಖತ್ ಸುದ್ದಿಯಲ್ಲಿದೆ.
ಚಿತ್ರದ ನಾಯಕ ನಟಿ ಪೂಜಾ ಹೆಗ್ಡೆ ಈ ಬಹುನಿರೀಕ್ಷಿತ ಪ್ರಾಜೆಕ್ಟ್‌ನಿಂದ ಹೊರಗುಳಿದ ನಂತರ ಮಹೇಶ್ ಬಾಬು ಅವರ 'ಗುಂಟೂರ್ ಕಾರಂ' ಸಖತ್ ಸುದ್ದಿ ಮಾಡಿತು. ಅದಕ್ಕೂ ಮುನ್ನ, ಸಂಗೀತ ಸಂಯೋಜಕ ಥಮನ್ ಕೂಡ ಚಿತ್ರತಂಡದಿಂದ ಹೊರಗುಳಿಯುತ್ತಾರೆ ಎಂದು ಹೇಳಲಾಯಿತು. ಶೂಟಿಂಗ್ ಡೇಟ್ಸ್ ಕೊರತೆ ಹಿನ್ನೆಲೆ, ಪೂಜಾ ಹೆಗ್ಡೆ ಈ ಸಿನಿಮಾದಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆ ಚಿತ್ರಕ್ಕಾಗಿ ಇನ್ನೋರ್ವ ನಾಯಕಿಯನ್ನು ಆಯ್ಕೆ ಮಾಡಲು ಚಿತ್ರತಂಡ ಮುಂದಾಯಿತು.
ವರದಿಗಳ ಪ್ರಕಾರ, ಮೀನಾಕ್ಷಿ ಛೌಧರಿ (Meenakshii Chaudhary) ಗುಂಟೂರು ಕಾರಂ ತಂಡವನ್ನು ಸೇರಲಿದ್ದಾರೆ. ಆದರೆ ನಟಿ ಪೂಜಾ ಹೆಗ್ಡೆ ಸ್ಥಾನಕ್ಕೆ ಮೀನಾಕ್ಷಿ ಚೌಧರಿ ಬರುತ್ತಿಲ್ಲ. ಶ್ರೀಲೀಲಾ ಅವರಿಗೆ ಆಫರ್ ಮಾಡಿದ ಪಾತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಅಂದ್ರೆ ನಟಿ ಶ್ರೀಲೀಲಾ ಕೂಡ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಈ ಚಿತ್ರದ ಭಾಗವಾಗೋದು ಡೌಟ್ ಅಂತೀರಾ. ಇಲ್ಲ, ಹಾಗೇನಿಲ್ಲ. ನಟಿ ಶ್ರೀಲೀಲಾ 'ಗುಂಟೂರ್ ಕಾರಂ'ನಲ್ಲಿ ನಟಿಸಲಿದ್ದಾರೆ. ಚಿತ್ರದಲ್ಲಿ ಪೂಜಾ ಹೆಗ್ಡೆ ಪಾತ್ರಕ್ಕೆ ಶ್ರೀಲೀಲಾ ಜೀವ ತುಂಬಬೇಕೆಂದು ಚಿತ್ರ ತಯಾರಕರು ನಿರ್ಧರಿಸಿದ್ದಾರೆ. ಹಾಗಾಗಿ ಮೀನಾಕ್ಷಿ ಚೌಧರಿ ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.