ಕನ್ನಡ ಚಿತ್ರರಂಗದ ಅಂಗಳದಲ್ಲಿ ವಸಿಷ್ಠ ಸಿಂಹ ಅಭಿನಯದ ಲವ್ ಲಿ ಸಿನಿಮಾ ಸೆಟ್ಟೇರಿದ ದಿನದಿಂದಲೂ ಸಿನಿರಸಿಕರ ಗಮನ ಸೆಳೆಯುತ್ತಲೇ ಇದೆ. ಸಿಲಿಕಾನ್ ಸಿಟಿಯಲ್ಲಿ ಮೊದಲ ಹಾಗೂ ಎರಡನೇ ಶೆಡ್ಯೂಲ್ನ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಉಡುಪಿಯ ಮಲ್ಪೆಯ ಪಡುಕೆರೆಯಲ್ಲಿ ಮೂರನೇ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.
ಲವ್ ಲಿ ಚಿತ್ರೀಕರಣಕ್ಕೆಂದೇ ಪಡುಕರೆಯ ಕಡಲ ತೀರದಲ್ಲಿ ಒಂದು ಕೋಟಿ ವೆಚ್ಚದಲ್ಲಿ ಮನೆ ಸೆಟ್ ಅನ್ನು ನಿರ್ಮಾಣ ಮಾಡಲಾಗಿದೆ. ಕೇವಲ 25 ದಿನದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದ್ದು, ಕಳೆದ 10 ದಿನಗಳಿಂದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ವಸಿಷ್ಠ ಸಿಂಹ, ಸಾಧುಕೋಕಿಲ, ನಾಯಕಿ ಸ್ಟೆಫಿ ಪಟೇಲ್ ಸೇರಿದಂತೆ ಹಲವರು ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.
ನಟ ವಸಿಷ್ಠ ಸಿಂಹ ಮಾತನಾಡಿ, ಇದೊಂದು ಕಮರ್ಶಿಯಲ್ ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ. ರೌಡಿಸಂ ಕಥಾಹಂದರ ಕೂಡ ಇದೆ. ನೈಜ ಘಟನೆಯಿಂದ ಸ್ಪೂರ್ತಿ ಪಡೆದು ಸಿನಿಮೀಯ ರೀತಿಯಲ್ಲಿ ಹೇಳಹೊರಟಿದ್ದೇವೆ. ಎಲ್ಲಾ ರೀತಿಯ ಭಾವನೆಗಳನ್ನು ಒಮ್ಮೆಲೆ ಕ್ಯಾರಿ ಮಾಡುವ ಅವಕಾಶ ಚಿತ್ರದಲ್ಲಿ ಸಿಕ್ಕಿದೆ. ಪಾತ್ರಕ್ಕೆ ಜೀವ ತುಂಬುವ ಕೆಲಸ ನಡೆಯುತ್ತಿದೆ. ಈ ಸಿನಿಮಾ ಸಿನಿಮಾಪ್ರಿಯರ ಮನಸ್ಸು ಗೆಲ್ಲುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.