ಭಾರತೀಯ ಚಿತ್ರರಂಗ ಕಂಡ ಶ್ರೇಷ್ಠ ನಟಿ ಶ್ರೀದೇವಿ ಅವರ ಜೀವನ ಚರಿತ್ರೆ ಪುಸ್ತಕ ರೂಪದಲ್ಲಿ ಬರಲಿದೆ. ಚಲನಚಿತ್ರ ನಿರ್ಮಾಪಕ, ನಟಿಯ ಪತಿ ಬೋನಿ ಕಪೂರ್ ಅವರು ಈ ವಿಷಯವನ್ನು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಪುಸ್ತಕಕ್ಕೆ 'ಶ್ರೀದೇವಿ ದಿ ಲೈಫ್ ಆಫ್ ಎ ಲೆಜೆಂಡ್' ('SRIDEVI The Life of a Legend') ಎಂದು ಶೀರ್ಷಿಕೆ ನೀಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ 'ಶ್ರೀದೇವಿ ದಿ ಲೈಫ್ ಆಫ್ ಎ ಲೆಜೆಂಡ್' ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬೋನಿ ಕಪೂರ್, "ಶ್ರೀದೇವಿ ಪ್ರಕೃತಿಯ ಶಕ್ತಿ ಆಗಿದ್ದರು. ಅವರು ತಮ್ಮ ಪ್ರತಿಭೆಯನ್ನು ಪರದೆಯ ಮೂಲಕ ಪ್ರದರ್ಶಿಸಿ, ಅಭಿಮಾನಿಗಳೊಂದಿಗೆ ಹಂಚಿಕೊಂಡು ಖುಷಿಪಡುತ್ತಿದ್ದರು. ಆದರೆ ಖಾಸಗಿ ವ್ಯಕ್ತಿಯಾಗಿಯೇ ಉಳಿದುಬಿಡುತ್ತಿದ್ದರು. ಜೀವನಚರಿತ್ರೆಯನ್ನು ಧೀರಜ್ ಕುಮಾರ್ ಬರೆಯುತ್ತಿದ್ದಾರೆ. ಧೀರಜ್ ಕುಮಾರ್ ಅವರನ್ನು ಶ್ರೀದೇವಿ ತಮ್ಮ ಕುಟುಂಬದವರೆಂದೇ ಪರಿಗಣಿಸಿದ್ದರು. ಇವರು ಸಂಶೋಧಕರು, ಬರಹಗಾರರು ಮತ್ತು ಅಂಕಣಕಾರರಾಗಿದ್ದಾರೆ" ಎಂದು ತಿಳಿಸಿದ್ದಾರೆ.
50 ವರ್ಷ, 300ಕ್ಕೂ ಹೆಚ್ಚು ಸಿನಿಮಾ: 'ಅತಿಲೋಕ ಸುಂದರಿ' ಎಂದೇ ಖ್ಯಾತಿ ಗಳಿಸಿದ್ದ ಶ್ರೀದೇವಿ ಇಂದು ನಮ್ಮೊಂದಿಗಿಲ್ಲ. ಆದರೆ ಸಿನಿಮಾ ಸಾಧನೆಯ ಮೂಲಕ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಾಲನಟಿಯಾಗಿ ಅಭಿನಯ ಆರಂಭಿಸಿದ್ದ ಅವರು ಸುಮಾರು 50 ವರ್ಷಗಳಲ್ಲಿ 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲಿವುಡ್, ಕಾಲಿವುಡ್, ಮಾಲಿವುಡ್, ಟಾಲಿವುಡ್ ಹಾಗು ಸ್ಯಾಂಡಲ್ವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಅಭಿನಯಿಸಿದ್ದ ಪಾತ್ರಗಳಿಗೆ ಜೀವ ತುಂಬಿದ್ದರು. ಅಮೋಘ ಅಭಿನಯದಿಂದ ಮೇರು ನಟಿಯಾಗಿ ಬಹುಕಾಲ ಸಿನಿಮಾ ರಂಗವನ್ನು ಆಳಿದ್ದರು. ಅವರ ಪ್ರತೀ ಪಾತ್ರವೂ ಮನೋಜ್ಞವಾಗಿ ಮೂಡಿಬಂದಿದೆ. ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ರಾಜ್ಯ ಸರ್ಕಾರದ ಪ್ರಶಸ್ತಿಗಳು ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಶ್ರೀದೇವಿ ಮುಡಿಗೇರಿಸಿಕೊಂಡಿದ್ದರು.
ಇದನ್ನೂ ಓದಿ:ಕಪಿಲ್ ಶರ್ಮಾ ಶೋನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್: ಪ್ರೇಕ್ಷಕರಿಗೆ ಹಾಸ್ಯದ ರಸದೌತಣ ಪಕ್ಕಾ