ಹೊಸ ವರ್ಷದ ಆರಂಭದಲ್ಲಿ ಕಂಟೆಂಟ್ ಆಧಾರಿತ ಚಿತ್ರಗಳು ಬಿಡುಗಡೆ ಆಗಲು ಸಜ್ಜಾಗಿವೆ. ನಿರ್ದೇಶಕಿ ಚಂಪಾ ಪಿ. ಶೆಟ್ಟಿ ನಿರ್ದೇಶನದ ಕೋಳಿ 'ಎಸ್ರು' ಹಾಗೂ ಪೃಥ್ವಿ ಕೋಣನೂರು ನಿರ್ದೇಶಿಸಿರುವ 'ಹದಿನೇಳೆಂಟು' ಸಿನಿಮಾಗಳಿಗೆ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹಾಗೂ ಸಿನಿಮಾ ಪತ್ರಕರ್ತ ಜೋಗಿ ಸಾಥ್ ಸಿಕ್ಕಿದೆ. ಹೌದು, ಬಿಡುಗಡೆಗೂ ಮುನ್ನ ಹಲವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ಈ ಎರಡೂ ಚಿತ್ರಗಳ ಟ್ರೇಲರ್ ಅನ್ನು ಅನಾವರಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಕನ್ನಡದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು "ಕೋಳಿ ಎಸ್ರು" ಚಿತ್ರದ ಟ್ರೇಲರ್ ಅನ್ನು ಹಾಗೂ ಜನಪ್ರಿಯ ಲೇಖಕ, ಪತ್ರಕರ್ತ ಜೋಗಿ ಅವರು "ಹದಿನೇಳೆಂಟು" ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು. ಚಂಪಾ ಶೆಟ್ಟಿ ಅವರು ಈ ಹಿಂದೆ 'ಅಮ್ಮಚ್ಚಿಯೆಂಬ ನೆನಪು' ಚಿತ್ರವನ್ನು, ಪೃಥ್ವಿ ಕೋಣನೂರು ಅವರು ರೈಲ್ವೇ ಚಿಲ್ಡ್ರನ್ ಹಾಗೂ ಪಿಂಕಿ ಎಲ್ಲಿ ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಇವರಿಬ್ಬರು ತಮ್ಮ ನಿರ್ದೇಶನದ ಮುಂದಿನ ಸಿನಿಮಾಗಳನ್ನು ಇದೇ ತಿಂಗಳಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ. ಎರಡು ತಂಡಗಳು ಸೇರಿ ಬಿಡುಗಡೆಗೆ ಹೊಸ ಯೋಜನೆ ಹಾಕಿಕೊಂಡಿದ್ದಾರೆ.
ಈ ಎರಡು ಚಿತ್ರಗಳು ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಮಾಮಿ ಚಿತ್ರೋತ್ಸವ (MAMI), ಹಾಂಗ್ ಕಾಂಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕೇರಳ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಟಿಐಎಫ್ಎಫ್ ಕಿಡ್ಸ್ (TIFF), ಝ್ಲಿನ್ ಚಲನಚಿತ್ರೋತ್ಸವ (Zlin), ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್, ಐಎಫ್ಎಫ್ಐ ಗೋವಾ ಚಿತ್ರೋತ್ಸವ (IFFI), ಪ್ರೇಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್, ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಸೇರಿದಂತೆ ಮೊದಲಾದ ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆ ಆಗಿವೆ. ಮಾತ್ರವಲ್ಲದೇ ಸುಮಾರು 50ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡು ಸುಮಾರು 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿವೆ.