ಮೊದಲ ದಿನದ 15.8 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದ ಫರ್ಹಾದ್ ಸಾಮ್ಜಿ ನಿರ್ದೇಶನದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರ ಎರಡನೇ ದಿನ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಯಿತು.
ಸಲ್ಮಾನ್ ಖಾನ್ ಮುಖ್ಯಭೂಮಿಕೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಶುಕ್ರವಾರದಂದು (21-4-23) ಸುಮಾರು 100ಕ್ಕೂ ಹೆಚ್ಚು ದೇಶಗಳಲ್ಲಿ ಅದ್ಧೂರಿಯಾಗಿ ತೆರೆಕಂಡಿದೆ. ನಾಲ್ಕು ವರ್ಷಗಳ ಬ್ರೇಕ್ ನಂತರ ಬಂದ ಚಿತ್ರವಿದು. ಪಠಾಣ್ ಬಳಿಕ ಬಂದ ಬಹುನಿರೀಕ್ಷಿತ ಚಿತ್ರವಿದು. ಆದ್ರೆ ಪಠಾಣ್ ಮತ್ತು ಸಲ್ಮಾನ್ ಕೊನೆಯ ಸಿನಿಮಾಗೆ ಹೋಲಿಸಿದರೆ ಕಲೆಕ್ಷನ್ ವಿಚಾರದಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಹಿಂದೆ ಉಳಿದಿದೆ. ಎರಡು ಅಂಕಿಗಳೊಂದಿಗೆ ಬಾಕ್ಸ್ ಆಫೀಸ್ ಸಂಖ್ಯೆ ಆರಂಭಗೊಂಡಿದ್ದರೂ, ನಿರೀಕ್ಷೆ ತಲುಪುವಲ್ಲಿ ಚಿತ್ರ ವಿಫಲವಾಗಿದೆ ಅನ್ನೋದು ಸಿನಿ ಪಂಡಿತರ ಅಭಿಪ್ರಾಯ. ವಿಮರ್ಶೆಯಲ್ಲೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಅಭಿನಯದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ನ ಮೊದಲ ದಿನ 15.81 ಕೋಟಿ ರೂಪಾಯಿ, ಎರಡನೇ ದಿನ 25 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಎರಡು ದಿನಗಳಲ್ಲಿ ಒಟ್ಟು 41 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಸಲ್ಮಾನ್ ಖಾನ್ ಅವರ ಕೊನೆಯ ಭಾರತ್ (2019) ಸಿನಿಮಾ ಮೊದಲ ದಿನ 42.30 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ವೆಂಕಟೇಶ್ ದಗ್ಗುಬಾಟಿ, ಶೆಹನಾಜ್ ಗಿಲ್, ಪಲಕ್ ತಿವಾರಿ, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್ ಮತ್ತು ಜಗಪತಿ ಬಾಬು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಶನಿವಾರದಂದು ಈ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾದ ಆಕ್ಯುಪೆನ್ಸಿ ಶೇ. 27.05ರಷ್ಟಿತ್ತು. ಈದ್ ಸಂದರ್ಭ ಬಿಡುಗಡೆ ಆದ ಚಿತ್ರ ಎರಡನೇ ದಿನ (ವಾರಾಂತ್ಯ) ಉತ್ತಮ ವ್ಯವಹಾರ ನಡೆಸಿದೆ. ಇಂದು ಭಾನುವಾರ, ರಜಾ ದಿನ ಹಿನ್ನೆಲೆ ಕಲೆಕ್ಷನ್ ಸಂಖ್ಯೆ ಮತ್ತಷ್ಟು ಏರುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.