ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಟ್ರೇಲರ್ನಿಂದಲೇ ಭರವಸೆ ಹುಟ್ಟಿಸಿರುವ ಹೊಸ ಚಿತ್ರ 'ಕೌಸಲ್ಯ ಸುಪ್ರಜಾ ರಾಮ'. ಲವ್ ಬರ್ಡ್ಸ್ ಹಾಗು ದಿಲ್ ಪಸಂದ್ ಚಿತ್ರಗಳ ನಂತರ ಡಾರ್ಲಿಂಗ್ ಕೃಷ್ಣ ನಟನೆಯ ಕೌಸಲ್ಯ ಸುಪ್ರಜಾ ರಾಮ ಚಿತ್ರಕ್ಕೆ ನಟ ಕಿಚ್ಚ ಸುದೀಪ್ ಬೆಂಬಲ ಸಿಕ್ಕಿದೆ. ಶಶಾಂಕ್ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರದ ಟ್ರೇಲರ್ ಅನ್ನು ಸುದೀಪ್ ಅನಾವರಣಗೊಳಿಸಿದ್ದಾರೆ.
ಬಳಿಕ ಮಾತನಾಡಿದ ಸುದೀಪ್, ಟ್ರೇಲರ್ನಲ್ಲಿ ಬಹಳ ಒಳ್ಳೆಯ ಕಥೆ ಕಂಡೆ. ಇಲ್ಲಿ ನಂಬಿಕೆ ಮತ್ತು ಸಂಬಂಧಗಳ ಸಂಘರ್ಷವಿದೆ. ಶಶಾಂಕ್ ಎಮೋಷನ್ಗಳನ್ನು ಹಿಡಿದಿಡುವ ರೀತಿ ನನಗಿಷ್ಟ. ಹಾಡುಗಳು ಚೆನ್ನಾಗಿವೆ. ಚಿತ್ರವೂ ಸಹ ಚೆನ್ನಾಗಿ ಮೂಡಿ ಬಂದಿರುತ್ತದೆ. ಯಶಸ್ವಿಯಾಗಲಿ ಎಂದು ಹಾರೈಸಿದರು.
ನಟ ಕೃಷ್ಣ ಮಾತನಾಡಿ, ನಾನು ಇಷ್ಟು ವರ್ಷಗಳಲ್ಲಿ ಕೇಳಿರುವ ದಿ ಬೆಸ್ಟ್ ಕಥೆ ಇದು. ಚಿತ್ರದಲ್ಲಿ ಸಾಕಷ್ಟು ವಿಷಯಗಳನ್ನು ಮನರಂಜನಾತ್ಮಕವಾಗಿ ಹೇಳಿದ್ದಾರೆ. ಶಶಾಂಕ್ ಅವರು ಬಂದಾಗ ಕಥೆ ಇರಲಿಲ್ಲ. ನಿಮಗೆ ಯಾವ ತರಹದ ಸಿನಿಮಾ ಬೇಕು ಎಂದು ಅವರು ನನ್ನನ್ನು ಕೇಳಿದರು. ನೀವು ನಿಮ್ಮ ಸ್ಟೈಲ್ನಲ್ಲೇ ಮಾಡಿ ಎಂದು ಹೇಳಿದೆ. ಒಂದು ತಿಂಗಳ ನಂತರ ಈ ಕಥೆ ತಂದರು. ಬಹಳ ಸುಲಭವಾಗಿ ಚಿತ್ರದ ಕೆಲಸ ಮುಗಿದಿದೆ. ನಟನೆ ಮಾಡಿದ್ದೇ ಗೊತ್ತಾಗಲಿಲ್ಲ. ಈ ಸಿನಿಮಾ ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದರು.