'ಲವ್ ಮಾಕ್ಟೇಲ್' ಖ್ಯಾತಿಯ ಡಾರ್ಲಿಂಗ್ ಕೃಷ್ಣ 'ಕೌಸಲ್ಯಾ ಸುಪ್ರಜಾ ರಾಮ'ನಾಗಿ ತೆರೆ ಮೇಲೆ ಬರಲು ಸಿದ್ಧರಾಗಿದ್ದಾರೆ. ಮೊಗ್ಗಿನ ಮನಸು, ಬಚ್ಚನ್, ಮುಂಗಾರು ಮಳೆ 2 ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ಸ್ಯಾಂಡಲ್ವುಡ್ ಸ್ವ-ಮೇಕ್ ನಿರ್ದೇಶಕ ಶಶಾಂಕ್ ಅವರು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರ ಬಿಡುಗಡೆಗೂ ಮುಹೂರ್ತ ನಿಗದಿಯಾಗಿದ್ದು, ಬಹುನಿರೀಕ್ಷಿತ ಸಿನಿಮಾವು ಜುಲೈ 28 ರಂದು ತೆರೆ ಕಾಣಲಿದೆ. ಅದಕ್ಕೂ ಮುನ್ನ ಚಿತ್ರತಂಡ ಟ್ರೇಲರ್ ಬಿಡುಗಡೆಗೊಳಿಸಿದೆ.
ಕೌಸಲ್ಯಾ ಸುಪ್ರಜಾ ರಾಮ ಒಂದು ರೀತಿಯಲ್ಲಿ ಎಲ್ಲರ ಮನೆಯ ಕಥೆಯಂತಿದೆ. ಟ್ರೇಲರ್ ನೋಡಿದವರಿಗೆ ಇದು ಪುರುಷ ಪ್ರಧಾನ ಸಮಾಜದ ಕಥೆ ಎನಿಸುತ್ತದೆ. ಆದರೆ ಪುರುಷ ಪ್ರಧಾನ ಸಮಾಜದ ಪ್ರತೀಕದಂತಿರುವ ನಾಯಕ ನಟ ನಂತರದಲ್ಲಿ ಏನಾಗುತ್ತಾನೆ? ಅನ್ನೋದೇ ಕಥಾಹಂದರ. ಪುರುಷರ ಅಹಂ ಎಂಬುದು ಸಮಾಜವನ್ನು ಎಷ್ಟು ಆವರಿಸಿಕೊಂಡಿದೆ. ಅದರ ಪರಿಣಾಮ ಏನು ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಇದು ತಾಯಿ ಮತ್ತು ಮಗನ ಬಾಂಧವ್ಯದ ಕಥೆಯ ಜೊತೆಗೆ ವಿಭಿನ್ನವಾಗಿದೆ.
ಇಲ್ಲಿ ಬರುವ ಎಲ್ಲಾ ಪಾತ್ರಗಳಿಗೂ ವಿಶೇಷ ಮಹತ್ವ ನೀಡಲಾಗಿದೆ. ರಂಗಾಯಣ ರಘು ಅವರ ಆಕ್ಟಿಂಗ್ ಅಂತೂ ಸೂಪರ್ ಆಗಿದೆ. ಸ್ಟ್ರಿಕ್ಟ್ ಅಪ್ಪನಾಗಿ ಕಂಡಿದ್ದಾರೆ. ನಾಗಭೂಷಣ್ ಅವರ ಪಾತ್ರವೂ ಉತ್ತಮವಾಗಿದೆ. ಬೃಂದಾ ಆಚಾರ್ಯ ನಾಯಕಿಯಾಗಿ ನಟಿಸಿದ್ದು, ಕೃಷ್ಣನನ್ನು ಪ್ರೀತಿಯ ಬಲೆಗೆ ಬೀಳಿಸುವ ಪರಿ ಚೆನ್ನಾಗಿದೆ. ಮಿಲನಾ ನಾಗರಾಜ್ ಅವರು ಚಿತ್ರದಲ್ಲಿ ನಟಿಸಿರಬಹುದೇ? ಎಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಇದೀಗ ಖಚಿತವಾಗಿದೆ. ಟ್ರೇಲರ್ನ ಕೊನೆಯಲ್ಲಿ ಅವರು ಬೋಲ್ಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಅವರ ಪಾತ್ರ ಏನು ಎಂಬುದು ಇನ್ನೂ ಬಹಿರಂಗವಾಗಿಲ್ಲ.