ಪೊನ್ನಿಯಿನ್ ಸೆಲ್ವನ್ 2 ಚಿತ್ರಮಂದಿರದಲ್ಲಿ ಧೂಳೆಬ್ಬಿಸುತ್ತಿದೆ. ತೆರೆಕಂಡು ನಾಲ್ಕೇ ದಿನದಲ್ಲಿ ಚಿತ್ರ ಜಗತ್ತಿನಾದ್ಯಂತ 200 ಕೋಟಿ ಸಂಗ್ರಹ ಮಾಡುವಲ್ಲಿ ಯಶಸ್ವಿಯಾಗಿದೆ. ಮಣಿರತ್ನಂ ನಿರ್ದೇಶನದ ಈ ಸಿನಿಮಾದಲ್ಲಿ ಘಟಾನುಘಟಿಗಳು ನಟಿಸಿದ್ದು, ಪ್ರತಿಯೊಬ್ಬರ ಪಾತ್ರವೂ ವಿಭಿನ್ನವಾಗಿದೆ. ಈ ಸಿನಿಮಾ ವೀಕ್ಷಿಸಲು ನಟ ಕಾರ್ತಿ ಅಭಿಮಾನಿಗಳು ಜಪಾನ್ನಿಂದ ಚೆನ್ನೈಗೆ ಆಗಮಿಸಿದ್ದರು. ನಟ ಕೂಡ ತಮ್ಮ ಅಭಿಮಾನಿಗಳಿಗೆ ಸಮಯ ಮೀಸಲಿಟ್ಟಿದ್ದರು. ಈ ವಿಷಯವೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಹೌದು, ಜಪಾನ್ನಿಂದ ಚೆನ್ನೈವರೆಗೆ ಪ್ರಯಾಣಿಸಿದ ತಮ್ಮ ನಿಷ್ಠಾವಂತ ಅಭಿಮಾನಿಗಳನ್ನು ಭೇಟಿ ಮಾಡಲು ನಟ ಕಾರ್ತಿ ಸಮಯ ಮಾಡಿಕೊಂಡರು. ಕಾರ್ತಿ ಅವರ ಅಭಿಮಾನಿಗಳಾದ ತೆರುಮಿ ಕಕುಬರಿ ಫುಜಿಡಾ (Terumi Kakubari Fujieda) ಮತ್ತು ಇಸಾವೊ ಎಂಡೋ (Isao Endo) ಅವರು ಮಣಿರತ್ನಂ ಅವರ ಚಲನಚಿತ್ರದಲ್ಲಿ ತಮ್ಮ ಮೆಚ್ಚಿನ ನಟನ ಅಭಿನಯ ನೋಡಲು ಜಪಾನ್ನಿಂದ ಭಾರತಕ್ಕೆ ಆಗಮಿಸಿದ್ದರು. ಬಹಳ ಸಮಯದಿಂದ ನಟ ಕಾರ್ತಿ ಅವರನ್ನು ಫಾಲೋ ಮಾಡುತ್ತಿದ್ದರು. ಅವರ ನಟನೆಗೆ ಮನಸೋತಿದ್ದರು. ನಟ ಕಾರ್ತಿ ಅಭಿಮಾನಿಗಳನ್ನು ಸ್ವಾಗತಿಸಿದರು ಮತ್ತು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಸತ್ಕರಿಸಿದರು.
ಅಭಿಮಾನಿಗಳ ಭಾರತ ಭೇಟಿಯ ಬಗ್ಗೆ ತಿಳಿದ ನಂತರ ಅವರನ್ನು ಭೇಟಿ ಮಾಡಲು ಮತ್ತು ಮಾತನಾಡಲು ನಟ ಕಾರ್ತಿ ಸಮಯ ತೆಗೆದುಕೊಂಡರು. ಸದ್ಯ ಸಾಮಾಜಿಕ ಮಾಧ್ಯಮ ನಟ ಕಾರ್ತಿ ಮತ್ತು ಅವರ ಫಾರಿನ್ ಫ್ಯಾನ್ಸ್ಗಳ ಚಿತ್ರಗಳಿಂದ ತುಂಬಿದೆ. ಪೊನ್ನಿಯಿನ್ ಸೆಲ್ವನ್ 2 ವೀಕ್ಷಿಸಲು ಕೇವಲ ಮೂರು ದಿನಗಳ ಕಾಲ ಚೆನ್ನೈಗೆ ಪ್ರಯಾಣಿಸಿದ್ದೇನೆ ಎಂದು ಅಭಿಮಾನಿ ತೆರುಮಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸೋಮವಾರ ಸಂಜೆ ಅವರು ಜಪಾನ್ಗೆ ಹೊರಟರು. ಕೋವಿಡ್ಗೂ ಮುನ್ನ, ಅವರು ಭಾರತದಲ್ಲಿ ಎರಡು ವರ್ಷಗಳ ಕಾಲ ನೆಲೆಸಿದ್ದರು ಎಂದು ಸಹ ಹೇಳಿಕೊಂಡಿದ್ದಾರೆ.