70 ಹಾಗೂ 80ರ ದಶಕವು ಬಾಲಿವುಡ್ ಚಿತ್ರರಂಗ ಉತ್ತುಂಗದಲ್ಲಿದ್ದ ಕಾಲ. ದೊಡ್ಡ ಬಜೆಟ್ ಸಿನೆಮಾಗಳ ಜೊತೆಗೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದ ಅನೇಕ ಚಿತ್ರಗಳು ತೆರೆಕಂಡಿವೆ. ಆ ಸಂದರ್ಭದಲ್ಲೇ ಅನೇಕ ಚಿತ್ರಗಳು 100 ಕೋಟಿ ರೂಪಾಯಿ ಕ್ಲಬ್ ಸೇರಿದ್ದವಲ್ಲದೆ, ದಕ್ಷಿಣ ಭಾರತದ ಚಿತ್ರರಂಗವನ್ನು ಬಾಲಿವುಡ್ ಮಂದಿ ಹೀಗಳೆಯುತ್ತಿದ್ದರು. ಆದರೀಗ ಕಾಲ ಬದಲಾಗಿದೆ. ಟಾಲಿವುಡ್, ಕಾಲಿವುಡ್ ಜೊತೆಗೆ ಸ್ಯಾಂಡಲ್ವುಡ್ ಕೂಡ ವಿಶ್ವಾದ್ಯಂತ ಹವಾ ಸೃಷ್ಟಿಸಿದೆ.
ಸದ್ಯ ಕನ್ನಡದಲ್ಲೂ ಕೂಡ ದೊಡ್ಡಮಟ್ಟದ ಚಿತ್ರಗಳು ನಿರ್ಮಾಣ ಆಗುತ್ತಿವೆ. ಅದರಲ್ಲೂ ಅನೇಕ ಸಿನೆಮಾಗಳು ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ಕ್ಲಬ್ ಸೇರುತ್ತಿವೆ. ಹೀಗೆ ಸಿನಿಪ್ರಿಯರ ಮೆಚ್ಚುಗೆ ಗಳಿಸುವ ಮೂಲಕ ನೂರು ಕೋಟಿಗೂ ಅಧಿಕ ಗಳಿಕೆ ಮಾಡಿರುವ ಚಿತ್ರಗಳ ಕುರಿತಾದ ಮಾಹಿತಿ ಇಲ್ಲಿದೆ.
ಕೆಜಿಎಫ್ ಚಾಪ್ಟರ್-1:2018ರಲ್ಲಿ ಬಿಡುಗಡೆ ಆದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-1 ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿ ಭಾರತೀಯ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿತ್ತು. ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ಮೂಡಿಬಂದ ಚಿತ್ರವು ಅದ್ಧೂರಿ ಮೇಕಿಂಗ್ ಹೊಂದಿತ್ತು. ವಿಶ್ವಾದ್ಯಂತ 100 ಕೋಟಿ ರೂ. ಕ್ಲಬ್ ಸೇರಿದ ಮೊದಲ ಕನ್ನಡದ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕುರುಕ್ಷೇತ್ರ:ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ದೊಡ್ಡಮಟ್ಟದ ತಾರಾಗಣ ಹೊಂದಿದ್ದ 'ಕುರುಕ್ಷೇತ್ರ' ಸಿನೆಮಾ ಕೂಡ ಕನ್ನಡದಲ್ಲಿ ನೂರು ಕೋಟಿ ಕ್ಲಬ್ ಸೇರಿದೆ. 2019ರಲ್ಲಿ ತೆರೆಕಂಡ ಚಿತ್ರದಲ್ಲಿ ದುರ್ಯೊಧನನ ಪಾತ್ರದಲ್ಲಿ ದರ್ಶನ್ ಮಿಂಚಿದ್ದರು. ಅಲ್ಲದೆ, ರೆಬೆಲ್ ಸ್ಟಾರ್ ಅಂಬರೀಷ್, ರವಿಚಂದ್ರನ್, ಅರ್ಜುನ್ ಸರ್ಜಾ ಸೇರಿದಂತೆ ಹಲವರು ಅಭಿನಯಿಸಿದ್ದರು.
ರಾಬರ್ಟ್: 2021ರಲ್ಲಿ ರಿಲೀಸ್ ಆದ ದರ್ಶನ್ ಅಭಿನಯದ 'ರಾಬರ್ಟ್' ಸಿನೆಮಾ ಕೂಡ ಭರ್ಜರಿ ಯಶಸ್ಸು ಸಾಧಿಸಿತ್ತು. ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಗಮನ ಸೆಳೆದಿತ್ತು. ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದ ಚಿತ್ರದಲ್ಲಿ ದರ್ಶನ್ ಜೊತೆಗೆ ಜಗಪತಿ ಬಾಬು, ವಿನೋದ್ ಪ್ರಭಾಕರ್, ಆಶಾ ಭಟ್ ಇತರರು ಇದ್ದರು.