ಸಿನಿಮಾ ಎಂಬ ಕ್ರಿಯೇಟಿವ್ ಫೀಲ್ಡ್ನಲ್ಲಿ ಯಾರು ಏನು ಬೇಕಾದರೂ ಆಗಬಹುದು. ಸದ್ಯ ನಟನೆ ಹಾಗು ಸಿನಿಮಾ ನಿರ್ಮಾಣದಿಂದ ಕನ್ನಡಿಗರ ಮನಸ್ಸು ಗೆದ್ದಿರುವ ಸೃಜನ್ ಲೋಕೇಶ್ ಈಗ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಈವರೆಗೆ ಅಭಿನಯದಿಂದ ಸಿನಿ ಪ್ರಿಯರನ್ನು ರಂಜಿಸಿದ್ದ ಸೃಜನ್ ಲೋಕೇಶ್ ಇದೀಗ 'GST' ಎಂಬ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ಸಮಾರಂಭ ಶ್ರೀಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿದ್ದು, ಮೊದಲ ದೃಶ್ಯಕ್ಕೆ ಸಂದೇಶ್ ನಾಗರಾಜ್ ಆರಂಭ ಫಲಕ ತೋರಿದರು. ಗಿರಿಜಾ ಲೋಕೇಶ್ ಕ್ಯಾಮರಾ ಚಾಲನೆ ಮಾಡಿದರು.
ಚಿತ್ರದಲ್ಲಿ ಮೂರು ವಿಶೇಷಗಳಿದೆ ಎಂದು ಮಾತು ಆರಂಭಿಸಿದ ಸೃಜನ್ ಲೋಕೇಶ್, ನನ್ನ ಲಕ್ಕಿ ನಂಬರ್ 7. ಮೊದಲು ಇದು 2023 ಇದನ್ನು ಕೂಡಿಸಿದಾಗ ಏಳು ಬರುತ್ತದೆ. ನನ್ನ ನಟನೆಯ 25 ನೇ ಚಿತ್ರ. 2+5 =7. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ 34ನೇ ಚಿತ್ರ. 3 + 4 ಕೂಡಿದಾಗ ಏಳಾಗುತ್ತದೆ. ಇನ್ನೊಂದು ವಿಶೇಷ, ನಮ್ಮ ತಾತನ ಚಿತ್ರದಲ್ಲಿ ನಮ್ಮ ಅಪ್ಪ ಬಾಲ ಕಲಾವಿದನಾಗಿ, ನಮ್ಮಪ್ಪನ ಚಿತ್ರದಲ್ಲಿ ನಾನು ಬಾಲ ಕಲಾವಿದನಾಗಿ ಅಭಿನಯಿಸಿದ್ದರು. ಈಗ ನನ್ನ ಚಿತ್ರದಲ್ಲಿ ನನ್ನ ಮಗ ಮಾಸ್ಟರ್ ಸುಕೃತ್ ಬಾಲ ಕಲಾವಿದನಾಗಿ ನಟಿಸುತ್ತಿದ್ದಾನೆ ಎಂದು ತಿಳಿಸಿದರು.
ಅಲ್ಲದೇ, ನಾಲ್ಕನೇ ಜನರೇಶನ್ ಈ ರೀತಿ ನಟಿಸುತ್ತಿರುವುದು ಇದೇ ಮೊದಲು ಎನ್ನಬಹುದು. ಮತ್ತೊಂದು ವಿಶೇಷವೆಂದರೆ ನನ್ನ ಮೊದಲ ನಿರ್ದೇಶನದ ಚಿತ್ರದಲ್ಲೇ ನನ್ನ ತಾಯಿಗೆ ಆಕ್ಷನ್ ಕಟ್ ಹೇಳುತ್ತಿರುವುದು. ಈ ಎಲ್ಲಾ ಕಾರಣಗಳಿಂದ ಈ ಚಿತ್ರ ನನಗೆ ವಿಶೇಷ. ಇನ್ನು 'GST' ಬಗ್ಗೆ ಹೇಳಬೇಕೆಂದರೆ, ಚಿತ್ರಕ್ಕೆ 'ಘೋಸ್ಟ್ ಇನ್ ಟ್ರಬಲ್' ಎಂಬ ಅಡಿಬರಹವಿದೆ. ಈ ವಾಕ್ಯ ಹೇಳುವಂತೆ 'ದೆವ್ವಗಳಿಗೂ ಸಮಸ್ಯೆಯಿದೆ' ಎಂಬುದು. ಆ ಸಮಸ್ಯೆ ಏನು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಈ ಚಿತ್ರದಲ್ಲಿ ಮನರಂಜನೆಯ ಮಹಾಪೂರ ಹರಿಯುವುದು ಗ್ಯಾರಂಟಿ ಎಂದರು.