ಪ್ರಧಾನಿ ನರೇಂದ್ರ ಮೋದಿ ಅವರಿಂದು 73ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಜನನಾಯಕನಿಗೆ ಸೋಷಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳು ಕೂಡ 'ವಿಶ್ವದ ಅತ್ಯಂತ ಪ್ರೀತಿಯ ನಾಯಕ' ಎಂದೇ ಕರೆಯಲ್ಪಡುವ ಭಾರತದ ಹೆಮ್ಮೆಯ ಪ್ರಧಾನಿಗೆ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದ್ದಾರೆ.
ಹಿಂದಿ ಸಿನಿರಂಗದ ತಾರೆಯರಾದ ಲೇಡಿ ಸೂಪರ್ಸ್ಟಾರ್ ಕಂಗನಾ ರಣಾವತ್, ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್, ಹೇಮಾ ಮಾಲಿನಿ, ಸನ್ನಿ ಡಿಯೋಲ್, ಅನುಪಮ್ ಖೇರ್, ಕಿರಣ್ ಖೇರ್ ಸೇರಿದಂತೆ ಅನೇಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಲು ಸೋಷಿಯಲ್ ಮೀಡಿಯಾವನ್ನು ವೇದಿಕೆಯನ್ನಾಗಿ ಬಳಸಿಕೊಂಡರು.
ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಪ್ರಧಾನಿ ಮೇಲಿನ ಆಳವಾದ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. "ತನ್ನ ಕಠಿಣ ಪರಿಶ್ರಮದ ಮೂಲಕ ಸಬಲೀಕರಣದ ಉತ್ತುಂಗಕ್ಕೆ ಏರಿದ ಸಾಮಾನ್ಯ ವ್ಯಕ್ತಿ ಮತ್ತು ನವ ಭಾರತದ ವಾಸ್ತುಶಿಲ್ಪಿಯಾಗಿರುವ ವಿಶ್ವದ ಅತ್ಯಂತ ಪ್ರೀತಿಯ ನಾಯಕನಿಗೆ ಜನ್ಮದಿನದ ಶುಭಾಶಯಗಳು. ನೀವು ಕೇವಲ ಭಾರತದ ಜನತೆಗೆ ಪ್ರಧಾನಿಯಲ್ಲ. ಶ್ರೀರಾಮನಂತೆ ನಿಮ್ಮ ಹೆಸರು ಕೂಡ ಈ ರಾಷ್ಟ್ರದಲ್ಲಿ ಶಾಶ್ವತವಾಗಿ ಕೆತ್ತಲಾಗಿದೆ. ನಿಮಗೆ ದೀರ್ಘಾಯುಷ್ಯ ಮತ್ತು ಆರೋಗ್ಯವನ್ನು ಭಗವಂತ ನೀಡಲಿ ಎಂದು ಹಾರೈಸುತ್ತೇನೆ" ಎಂದು ಶುಭಾಶಯ ಕೋರಿದ್ದಾರೆ.
ಅಕ್ಷಯ್ ಕುಮಾರ್ ಅವರು ಎಕ್ಸ್ನಲ್ಲಿ ಮೋದಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ನಟ ಪ್ರಧಾನಿಯವರನ್ನು ನಮಗೆಲ್ಲ ಸ್ಫೂರ್ತಿ ಎಂಬುದಾಗಿ ಶ್ಲಾಘಿಸಿದ್ದಾರೆ. ಜನನಾಯಕನಿಗೆ ಆರೋಗ್ಯ, ಸಂತೋಷವನ್ನು ದೇವರು ಕರುಣಿಸಲು ಎಂದು ಹಾರೈಸಿದ್ದಾರೆ. "ಜನ್ಮದಿನದ ಶುಭಾಶಯಗಳು ನರೇಂದ್ರ ಮೋದಿ ಜಿ. ವರ್ಷದಿಂದ ವರ್ಷಕ್ಕೆ ನಮಗೆ ಸ್ಫೂರ್ತಿ ನೀಡುತ್ತೀರಿ. ನಿಮಗೆ ಉತ್ತಮ ಆರೋಗ್ಯ ಮತ್ತು ಸಂತೋಷ ಸದಾ ಇರಲಿ" ಎಂದು ಬರೆದುಕೊಂಡಿದ್ದಾರೆ.