ಆ್ಯಕ್ಷನ್ ಸೀಕ್ವೆನ್ಸ್ ಜೊತೆಗೆ ರೈತರ ಬಗೆಗಿನ ಕಥೆ ಆಧರಿಸಿ ಮೂಡಿಬಂದ ಸಿನಿಮಾ 'ಫೈಟರ್'. ಕಳೆದ ವಾರವಷ್ಟೇ ಚಿತ್ರ ತೆರೆಕಂಡು ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಈ ಯಶಸ್ಸಿನ ಸಂಭ್ರಮವನ್ನು ಚಿತ್ರತಂಡ ಇತ್ತೀಚೆಗೆ ಹಂಚಿಕೊಂಡಿತ್ತು.
ಫೈಟರ್ ಸೀಕ್ವೆಲ್:ಫೈಟರ್ ಸಕ್ಸಸ್ ಖುಷಿಯಲ್ಲಿರುವ ನಾಯಕ ನಟ ವಿನೋದ್ ಪ್ರಭಾಕರ್ ಮಾತನಾಡಿ, ''ಒಂದೊಳ್ಳೆ ಕಂಟೆಂಟ್ ಇರುವ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ ಎಂಬುದಕ್ಕೆ ಫೈಟರ್ ಸಿನಿಮಾವೇ ಉದಾಹರಣೆ. ನಮ್ಮ ಚಿತ್ರದ ಯಶಸ್ಸಿಗೆ ಕಾರಣರಾದ ಸಮಸ್ತರಿಗೂ ಹೃತ್ಪೂರ್ವಕ ಧನ್ಯವಾದಗಳು. ನಾನು ಚಿತ್ರದಲ್ಲಿ ರೈತರ ಪರ ಹೋರಾಡುವ ಫೈಟರ್. ಚಿತ್ರ ರೈತರಿಗೂ ಬಹಳ ಇಷ್ಟವಾಗಿದೆ. ಸಾಕಷ್ಟು ರೈತ ಮಿತ್ರರು ನಮಗೆ ಕರೆ ಮಾಡಿ ಚಿತ್ರ ಚೆನ್ನಾಗಿದೆ ಎಂದು ತಿಳಿಸಿದ್ದಾರೆ. ಇಂದಿನಿಂದ ನಾನು ಬೇರೆ ಬೇರೆ ಊರುಗಳಲ್ಲಿ ಪ್ರೇಕ್ಷಕರೊಂದಿಗೆ ಸಿನಿಮಾ ವೀಕ್ಷಿಸಲು ತೆರಳುತ್ತಿದ್ದೇನೆ. ಮೊದಲು ರಾಮನಗರದಿಂದ ಪ್ರಯಾಣ ಆರಂಭಿಸುತ್ತಿದ್ದೇನೆ. ನಿರ್ಮಾಪಕ ಸೋಮಶೇಖರ್ ಅವರಿಗೆ ಒಳ್ಳೆಯದಾಗಲಿ. ಆದಷ್ಟು ಬೇಗ ಫೈಟರ್ ಭಾಗ 2 ಶುರುವಾಗಲಿ. ಫೈಟರ್ ಸೀಕ್ವೆಲ್ ಕೂಡ ಸಂದೇಶವೊಂದನ್ನು ಸಾರುವ ಕಥೆ ಒಳಗೊಂಡಿರುತ್ತದೆ'' ಎಂದು ತಿಳಿಸಿದರು.
ಸಿನಿಮಾಗೆ ಸಕಾರಾತ್ಮಕ ಸ್ಪಂದನೆ:ನಿರ್ದೇಶಕ ನೂತನ್ ಉಮೇಶ್ ಮಾತನಾಡಿ, "ಬಿಡುಗಡೆ ಆದ ದಿನದಿಂದಲೂ "ಫೈಟರ್" ಬಗ್ಗೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದೆ. ಜನರು ಚಿತ್ರವನ್ನು ಇಷ್ಟಪಡುತ್ತಿದ್ದಾರೆ. ಚಿತ್ರದಲ್ಲಿರುವ ಸಾಕಷ್ಟು ಉತ್ತಮ ಅಂಶಗಳು ನೋಡುಗರಿಗೆ ಬಹಳ ಇಷ್ಟವಾಗುತ್ತಿದೆ. ಮಾಲ್ಗಳಲ್ಲೂ ಹೆಚ್ಚು ಫ್ಯಾಮಿಲಿ ಆಡಿಯನ್ಸ್ ಬರುತ್ತಿದ್ದಾರೆ. ಬಹಳ ಸಂತೋಷ ಆಗುತ್ತಿದೆ" ಎಂದರು.