ಹಾಡು ಹಾಗೂ ಟ್ರೈಲರ್ನಿಂದಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ ಮಾನ್ಸೂನ್ ರಾಗ. ನಟ ರಾಕ್ಷಸ ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಮೊದಲ ಬಾರಿಗೆ ಒಟ್ಟಿಗೆ ಸ್ಕ್ರೀನ್ ಹಂಚಿಕೊಂಡಿರುವ ಚಿತ್ರ. ಲವ್ ಸ್ಟೋರಿ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ಒಳಗೊಂಡಿರುವ ಚಿತ್ರ ಇದೇ 16ಕ್ಕೆ ರಾಜ್ಯಾದ್ಯಂತೆ ತೆರೆ ಕಾಣಲಿದೆ.
ಮಂಗಳವಾರ ಮಾನ್ಸೂನ್ ರಾಗ ಪ್ರಿ ರಿಲೀಸ್ ಈವೆಂಟ್ ನಡೆಯಿತು. ಕಾರ್ಯಕ್ರಮಕ್ಕೆ ದುನಿಯಾ ವಿಜಯ್ ಅತಿಥಿಯಾಗಿ ಆಗಮಿಸಿ ಇಡೀ ಚಿತ್ರತಂಡಕ್ಕೆ ಗುಡ್ ಲಕ್ ಹೇಳಿದರು. ಈ ಸಮಯದಲ್ಲಿ ನಟ ಧನಂಜಯ್, ರಚಿತಾ ರಾಮ್, ಬಹುಭಾಷಾ ನಟಿ ಸುಹಾಸಿನಿ, ಅಚ್ಯುತ್ ಕುಮಾರ್, ಯಶಾ ಶಿವಕುಮಾರ್, ನಿರ್ಮಾಪಕ ವಿಖ್ಯಾತ್, ನಿರ್ದೇಶಕ ರವೀಂದ್ರನಾಥ್ ಸೇರಿದಂತೆ ಇಡೀ ಚಿತ್ರತಂಡದ ಉಪಸ್ಥಿತಿ ಇತ್ತು.
ವೇದಿಕೆ ಮೇಲೆ ಡಾಲಿ, ದುನಿಯಾ ವಿಜಯ್ ಹಾಗೂ ರಚಿತಾ ರಾಮ್ ಚಿತ್ರದ ಹಾಡೊಂದಕ್ಕೆ ಮಸ್ತ್ ಸ್ಟೆಪ್ಸ್ ಹಾಕಿದರು. ರೆಟ್ರೋ ಲುಕ್ನಲ್ಲಿ ಬಂದಿದ್ದ ಧನಂಜಯ್ ಮಾನ್ಸೂನ್ ರಾಗ ಸಿನಿಮಾ ಒಂದು ಅದ್ಭುತ ಜರ್ನಿ ಅಂತಾ ಹೇಳಿದರು. ಇನ್ನು ನಾನು ಹೀರೋ ಆಗುವುದಕ್ಕೂ ಮುಂಚೆ ರಚಿತಾ ರಾಮ್ ಮನೆ ಹತ್ತಿರ ಸುತ್ತಾಡುತ್ತಿದ್ದೆವು, ಡಿಂಪಲ್ ಕ್ವೀನ್ ಕಾಣಿಸುತ್ತಾರೆ ಅಂತಾ ನೋಡುತ್ತಿದ್ದೆವು ಎಂದರು.
ಈ ಸಮಯದಲ್ಲಿ ಧನಂಜಯ್ ಸುಹಾಸಿನಿ ಅವರನ್ನು ನೋಡಿ ಕವಿತೆ ಕೂಡ ಹೇಳಿದರು. ಸುಹಾಸಿನಿ ಮೇಡಂ ಅವರನ್ನು ನಾನು ಇದೇ ಮೊದಲ ಬಾರಿಗೆ ಭೇಟಿಯಾಗಿರುವುದು. ಭಗವಂತ ನನಗೇನಾದ್ರೂ ಟೈಮ್ ಟ್ರಾವೆಲ್ ಮಾಡೋ ಅವಕಾಶ ಕೊಟ್ರೆ, ನಾನು ಹಿಂದೆ ಹೋಗಿ ಸುಹಾಸಿನಿ ಅವರ ಜೊತೆಗೆ ಬಂಧನ ಸಿನಿಮಾದಲ್ಲಿ ವಿಷ್ಣು ಸರ್ ಅವರು ಮಾಡಿದ್ದ ಒಂದು ಪಾತ್ರವನ್ನು ಮಾಡೋದಕ್ಕೆ ಇಷ್ಟಪಡುತ್ತೇನೆ. ಪ್ರೀತಿ ಸಿಗೋ ಅಂತ ಪಾತ್ರವನ್ನೇ ಹೇಳಬಹುದಾಗಿತ್ತು.
ಆದರೆ ಏಕೆ ಬಂಧನ ಸಿನಿಮಾದಲ್ಲಿ ವಿಷ್ಣು ಸರ್ ಮಾಡಿದ ಪಾತ್ರ ಮಾಡುತ್ತೇನೆಂದು ಹೇಳಿದೆ ಅಂದ್ರೆ, ನಮ್ಮ ಪಾಡಿಗೆ ನಾವು ಪ್ರೀತಿ ಮಾಡ್ಕೊಂಡು, ಆ ಕಣ್ಣು, ಆ ನಗು, ಆ ಚೆಂದ..ಆದಾದ ಮೇಲೆ ಅದು ನಮಗೆ ಸಿಗದೇ, ನಾವು ಅದನ್ನು ಕಳೆದುಕೊಂಡು, ಆ ಖುಷಿ ನೋವು ಎಲ್ಲ ಸೇರಿ ನೂರಾರು ಕವಿತೆ ಬರೆದು ಬಿಡುತ್ತಿದ್ದೆ, ಇದು ಎಷ್ಟು ಚಂದ ಅಲ್ವಾ ಎಂದು ಹೇಳಿದರು
ಮಾನ್ಸೂನ್ ರಾಗ ಸಿನಿಮಾ ಪ್ರಿ ರಿಲೀಸ್ ಈವೆಂಟ್ ವೇದಿಕೆ ನಂತರ ವೇದಿಕೆ ಮೇಲೆ ಬಂದ ಸುಹಾಸಿನಿ ಅವರ ಬಗ್ಗೆ ಧನಂಜಯ್ ಒಂದು ಕವಿತೆಯನ್ನೇ ಹೇಳಿದರು. ''ಮುಳುಗೇಳಬಹುದು ಈ ನಗುವಿನಲ್ಲಿ ಒಮ್ಮೆ..ಅಷ್ಟು ಶುಭ್ರ..ಮುತ್ತೆಣಿಸಬಹುದು ನಗುವ ಕಡಲಿನಲ್ಲಿ ಒಮ್ಮೆ..ಅಷ್ಟು ಶುಭ್ರ'' ಅಂತಾ ಹೇಳಿದರು. ಇನ್ನು ಧನಂಜಯ್ ಹೇಳಿದ ಈ ಕವಿತೆ ಕೇಳಿ ಖುಷಿಯಾದ ನಟಿ ಸುಹಾಸಿನಿ ಅವರು ಕೂಡಲೇ ಬಂಧನ ಸಿನಿಮಾದ 'ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ...ಹಾಡನ್ನು ಹೇಳುವ ಮೂಲಕ ಗಮನ ಸೆಳೆದರು.
ಮಾನ್ಸೂನ್ ರಾಗ ಟ್ರೈಲರ್ ಪ್ರಕಾರ, ಇದು ಲವ್ ಸ್ಟೋರಿ ಜೊತೆಗೆ ಸಂಬಂಧಗಳ ಮೌಲ್ಯಗಳನ್ನು ಹೊಂದಿರುವ ಕಥೆಯಾಗಿದೆ. ರಚಿತಾ ರಾಮ್ ವೇಶ್ಯೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಲೈಂಗಿಕ ಕಾರ್ಯಕರ್ತೆಯನ್ನು ಪ್ರೀತಿಸುವ ಪ್ರೇಮಿಯಾಗಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅಚ್ಯುತ್ ಕುಮಾರ್, ಸುಹಾಸಿನಿ ಮತ್ತು ಯಶಾ ಶಿವಕುಮಾರ್ ಪಾತ್ರಗಳು ಒಂದೊಂದು ಕಥೆಯನ್ನು ಹೇಳಲಿವೆ. ಎಸ್.ಕೆ ರಾವ್ ಕ್ಯಾಮಾರ ಕೈಚಳಕ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸಂಗೀತ ಮಾನ್ಸೂನ್ ರಾಗ ಚಿತ್ರದ ಹೈಲೆಟ್ಸ್.
ಇದನ್ನೂ ಓದಿ:ಸೆ.17ರ ಸಂಜೆ 5 ಗಂಟೆಗೆ ಕಬ್ಜ ಟೀಸರ್ ರಿಲೀಸ್.. ಚಿತ್ರಕ್ಕೆ ಬೆಂಬಲ ಕೊಡಿ ಎಂದ ಕಿಚ್ಚ ಸುದೀಪ್
ಮಾನ್ಸೂನ್ ರಾಗ ಸಿನಿಮಾ 70-80ರ ದಶಕದಲ್ಲಿ ನಡೆಯುವಂತಹ ಕಥೆಯನ್ನು ಹೊಂದಿದ್ದು, ರವೀಂದ್ರನಾಥ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಗುರುಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಪುಷ್ಪಕ ವಿಮಾನ ಸಿನಿಮಾ ಬಳಿಕ ಎ.ಆರ್. ವಿಖ್ಯಾತ್ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಮಾನ್ಸೂನ್ ರಾಗ ಸಿನಿಮಾದ ಪ್ರೀಮಿಯರ್ ಶೋ ಬುಕ್ಕಿಂಗ್ ಒಪನ್ ಆಗಿದ್ದು ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ.