ಹೊಸಬರ 'ವಸಂತಕಾಲದ ಹೂಗಳು' ಚಿತ್ರಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ಕನ್ನಡ ಚಿತ್ರರಂಗ ಅವಕಾಶಗಳ ಸಾಗರ. ಹೊಸ ಕಲಾವಿದರು ವಿಭಿನ್ನ ಕಂಟೆಂಟ್ ಜೊತೆಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಡೋದು ಇತ್ತೀಚೆಗೆ ಟ್ರೆಂಡ್ ಆಗಿದೆ. ಇದೀಗ ಸಚಿನ್ ಶೆಟ್ಟಿ ನಿರ್ದೇಶನದಲ್ಲಿ 'ವಸಂತಕಾಲದ ಹೂಗಳು' ಎಂಬ ಹೊಸ ಕಥೆಯೊಂದು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರವನ್ನು ನೋಡಿ ಮೆಚ್ಚಿರುವ ಧ್ರುವ ಸರ್ಜಾ ಸಿನಿಮಾವನ್ನು ಪ್ರೆಸೆಂಟ್ ಮಾಡುವ ಮೂಲಕ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
"ಇದು ಸಣ್ಣ ತಂಡವೊಂದು ಶ್ರದ್ಧೆಯಿಂದ ಬರಿ ಕಥೆಯನ್ನಷ್ಟೇ ನಂಬಿ ಮಾಡಿದ ಒಂದು ಅಚ್ಚುಕಟ್ಟಾದ ಚಿತ್ರ. ವಿಭಿನ್ನ ಕಂಟೆಂಟ್ನೊಂದಿಗೆ ಬರುತ್ತಿರುವ ಹೊಸಬರ ಚಿತ್ರಗಳಿಗೆ ಉತ್ತೇಜನ ಕೊಡುವುದು ಈ ಹೊತ್ತಿನ ಅಗತ್ಯ ಎಂದು ನನಗನಿಸುತ್ತದೆ. ಹೀಗಾಗಿ ಈ ಉತ್ಸಾಹಿ ಯುವ ತಂಡಕ್ಕೆ, ಮುಖ್ಯವಾಗಿ ಒಂದು ಉತ್ತಮ ಚಿತ್ರಕ್ಕೆ ಬೆಂಬಲ ನೀಡುವ ಸಲುವಾಗಿ ಈ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕದ ಪರಿಸರ, ಕಾಲೇಜು ದಿನಗಳು, ತರಲೆ ಫ್ರೆಂಡ್ಸ್, ಮುದ್ದಾದ ಲವ್ ಸ್ಟೋರಿಗಳು ಇದನ್ನೆಲ್ಲ ನೀವು ಈ ಚಿತ್ರದಲ್ಲಿ ನೋಡಬಹುದು. ನಿಮ್ಮ ಟಿನೇಜ್ ಲೈಫ್ಗೆ ಮತ್ತೆ ಹೋಗಿ ಆ ನೆನಪುಗಳನ್ನು ಮೆಲುಕು ಹಾಕೋ ಹಾಗೆ ಈ ಚಿತ್ರ ಮಾಡುತ್ತದೆ ಎನ್ನುವ ನಂಬಿಕೆ ನನಗಿದೆ" ಎನ್ನುತ್ತಾರೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.
ಇದನ್ನೂ ಓದಿ:ನಿಖಿಲ್ ಶೂಟಿಂಗ್ ಸೆಟ್ಗೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಭೇಟಿ... ಅಭಿಮಾನಿಗಳಲ್ಲಿ ಕುತೂಹಲ
ಬಳಿಕ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಸಚಿನ್ ಶೆಟ್ಟಿ, "ಒಂದು ಚಿತ್ರವನ್ನು ತಯಾರಿಸುವುದು ಎಷ್ಟು ಕಷ್ಟವೋ ಅದಕ್ಕಿಂತ ಹೆಚ್ಚಿನ ಕಷ್ಟ ಜನರಿಗೆ ಆ ಚಿತ್ರವನ್ನು ತಲುಪಿಸುವುದರಲ್ಲಿದೆ. ಈ ನಿಟ್ಟಿನಲ್ಲಿ ನಾವು ಚಿತ್ರವನ್ನು ಪ್ರೆಸೆಂಟ್ ಮಾಡಲು ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿದೆವು. ಚಿತ್ರದ ಕಂಟೆಂಟ್ ಮೆಚ್ಚಿ ಅವರು ಚಿತ್ರವನ್ನು ಪ್ರೆಸೆಂಟ್ ಮಾಡಲು ಮುಂದೆ ಬಂದರು. ಇದು ನಮ್ಮ ಇಡೀ ತಂಡಕ್ಕೆ ಹೊಸ ಹುಮ್ಮಸ್ಸು ತಂದಿದೆ" ಎಂದು ಸಂತಸ ವ್ಯಕ್ತಪಡಿಸಿದರು.
ಚಿತ್ರತಂಡ: 'ವಸಂತಕಾಲದ ಹೂಗಳು' ಚಿತ್ರದಲ್ಲಿ ಸಚಿನ್ ರಾಥೋಡ್ ಮತ್ತು ರಾಧಾ ಭಗವತಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಅಶೋಕ ರಾಥೋಡ್ ಹಾಗೂ ಸಿದ್ದು ರಸೂರೆ ನಿರ್ಮಾಣ ಮಾಡಿದ್ದಾರೆ. ಟಿನೇಜ್ ಲವ್ ಸ್ಟೋರಿ ಹೊಂದಿರುವ ಈ ಚಿತ್ರ ಸಂಪೂರ್ಣವಾಗಿ ಬಿಜಾಪುರದಲ್ಲಿ ಚಿತ್ರೀಕರಣಗೊಂಡಿದೆ. ಇದೇ ನವೆಂಬರ್ 10ರಂದು 'ವಸಂತಕಾಲದ ಹೂಗಳು' ಚಿತ್ರ ತೆರೆ ಕಾಣಲಿದೆ.
ಇನ್ನು ಪೊಗರು ಸಿನಿಮಾ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೈ ವೊಲ್ಟೇಜ್ ಚಿತ್ರ ಮಾರ್ಟಿನ್. ನಿರ್ದೇಶಕ ಎ. ಪಿ ಅರ್ಜುನ್ ನಿರ್ದೇಶನದ ಹಾಗು ಫ್ಯಾಷನಿಟ್ ನಿರ್ಮಾಪಕ ಎಂದು ಕರೆಯಿಸಿಕೊಂಡಿರುವ ಉದಯ್ ಕೆ ಮೆಹ್ತಾ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದೆ. ಆಲ್ ಮೋಸ್ಟ್ ಚಿತ್ರೀಕರಣ ಮುಗಿಸಿ ಪ್ರೇಕ್ಷಕರ ಮುಂದೆ ಬರೋದಿಕ್ಕೆ ಚಿತ್ರತಂಡ ಸಜ್ಜಾಗಿದೆ.
ಇದನ್ನೂ ಓದಿ:ಬಾಕ್ಸ್ ಆಫೀಸ್ನಲ್ಲಿ ಘರ್ಷಿಸಲು ಸಜ್ಜಾದ 'ಮಾರ್ಟಿನ್' & 'ಯುವ'.. ಒಂದೇ ದಿನ 2 ಬಹುನಿರೀಕ್ಷಿತ ಚಿತ್ರಗಳು ರಿಲೀಸ್?