ರಣ್ಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಯಾಗಿ ನಟಿಸಿರುವ 'ಬ್ರಹ್ಮಾಸ್ತ್ರ' ಶುಕ್ರವಾರದಂದು ವಿಶ್ವಾದ್ಯಂತ 8,913 ಸ್ಕ್ರೀನ್ಗಳಲ್ಲಿ ಬಿಡುಗಡೆ ಆಗಿದೆ. ಬಹಿಷ್ಕಾರದ ಬಿಸಿ, ಸೌತ್ ಸಿನಿಮಾ ಇಂಡಸ್ಟ್ರಿಯ ಅಬ್ಬರ, ನಟ-ನಟಿಯ ವಿವಾದಾತ್ಮಕ ಹೇಳಿಕೆ ಎಫೆಕ್ಟ್ ಚಿಂತೆಯ ನಡುವೆಯೇ ಸಿನಿಮಾ ರಿಲೀಸ್ ಆಗಿ ಮೊದಲ ದಿನವೇ ಬಾಕ್ಸ್ ಆಫೀಸ್ ಉಡೀಸ್ ಮಾಡಿದೆ.
ಬ್ರಹ್ಮಾಸ್ತ್ರ ಸಿನಿಮಾ ತನ್ನ ಮೊದಲ ದಿನದಂದು ಜಗತ್ತಿನೆಲ್ಲೆಡೆ 75 ಕೋಟಿ ರೂ. ಸಂಗ್ರಹಿಸಿದೆ ಎಂದು ಚಿತ್ರ ತಯಾರಕರು ಇಂದು ತಿಳಿಸಿದ್ದಾರೆ. ಜೂನಿಯರ್ ಎನ್ಟಿಆರ್ ಹಾಗೂ ರಾಮ್ ಚರಣ್ ಅಭಿನಯದ ಆರ್ಆರ್ಆರ್ ಸಿನಿಮಾ ಮೊದಲ ದಿನ 20 ಕೋಟಿ ಗಳಿಕೆ ಮಾಡಿತ್ತು. ಸ್ವತಃ ರಣ್ಬೀರ್ ಕಪೂರ್ ಅಭಿನಯದ ಸಂಜು ಚಿತ್ರ 34.75 ಕೋಟಿ ಗಳಿಸಿತ್ತು. ಇದೀಗ ಬ್ರಹ್ಮಾಸ್ತ್ರ 75 ಕೋಟಿ ಕಲೆಕ್ಷನ್ ಮಾಡುವ ಮೂಲಕ ಎಲ್ಲಾ ದಾಖಲೆಗಳನ್ನೂ ಹಿಂದಕ್ಕೆ ತಳ್ಳಿದೆ.
ಚಿತ್ರ ನಿರ್ಮಾಣಕ್ಕೆ ಒಂಬತ್ತು ವರ್ಷಗಳ ಸುದೀರ್ಘ ಸಮಯ ತೆಗೆದುಕೊಳ್ಳಲಾಗಿದೆ. 400 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಮೊದಲ ದಿನ 25 ಕೋಟಿ ರೂ. ಗಳಿಸಬಹುದು ಎಂಬುದು ಒಂದು ಅಂದಾಜಾಗಿತ್ತು. ಆದರೆ ಮೊದಲ ದಿನದ ಕಲೆಕ್ಷನ್ ನಿರೀಕ್ಷೆಗೂ ಮೀರಿದೆ. ಪ್ರೊಡಕ್ಷನ್ ಬ್ಯಾನರ್‌ಗಳಾದ ಸ್ಟಾರ್ ಸ್ಟುಡಿಯೋಸ್ ಮತ್ತು ಧರ್ಮ ಪ್ರೊಡಕ್ಷನ್ಸ್ ಈ ಬಗ್ಗೆ ಮಾಹಿತಿ ಹಂಚಿಕೊಂಡು ಹರ್ಷ ವ್ಯಕ್ತಪಡಿಸಿದೆ.