ಬಿಗ್ ಬಾಸ್. ಇದು ಜನಪ್ರಿಯ ಕಿರುತೆರೆ ರಿಯಾಲಿಟಿ ಶೋ. ಹಲವು ಭಾಷೆಗಳಲ್ಲಿ ಪ್ರಸಾರವಾಗುವ ಶೋಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕನ್ನಡದಲ್ಲಿ ನಟ ಸುದೀಪ್ ನೇತೃತ್ವ ವಹಿಸಿದರೆ, ಹಿಂದಿ ಭಾಷೆಯಲ್ಲಿ ಸಲ್ಮಾನ್ ಖಾನ್ ಶೋ ಹೋಸ್ಟ್ ಮಾಡುತ್ತಾರೆ. ಎರಡೂ ಭಾಷೆಯ ಕಾರ್ಯಕ್ರಮಗಳು ದೊಡ್ಡ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದೆ. ಈ ಎರಡೂ ಭಾಷೆಗಳಲ್ಲಿ ಹೊಸ ಸೀಸನ್ಗಳು ಶೀಘ್ರದಲ್ಲೇ ಆರಂಭವಾಗಲಿದೆ. ಅಭಿಮಾನಿಗಳ ಕುತೂಹಲ ಹೆಚ್ಚಿಸಲು ಕನ್ನಡ ಮತ್ತು ಹಿಂದಿಯಲ್ಲಿ ಒಟ್ಟಿಗೆ ಪ್ರೋಮೋ ಅನಾವರಣಗೊಳಿಸಲಾಗಿದೆ.
ಸುದೀಪ್ ನಿರೂಪಣೆಯಲ್ಲಿ ಮೂಡಿಬರುವ ಬಿಗ್ ಬಾಸ್ ಈಗಾಗಲೇ 9 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. 10ನೇ ಸೀಸನ್ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಪ್ರೇಕ್ಷಕರು ಶೋ ನೋಡಲು ಉತ್ಸುಕರಾಗಿದ್ದಾರೆ. ಅಭಿಮಾನಿಗಳ ಕುತೂಹಲ ಹೆಚ್ಚಿಸಲು ಕನ್ನಡದ ಬಿಗ್ ಬಾಸ್ ತಂಡ ಒಂದು ವಿಭಿನ್ನ ಪ್ರೋಮೋ ಹೊರತಂದಿದೆ. ಸಾಮಾನ್ಯವಾಗಿ ಪ್ರೋಮೋ ವಿಡಿಯೋಗಳಲ್ಲಿ ಕ್ಯಾಮರಾ, ಬಿಗ್ ಬಾಸ್ ಮನೆ ತೋರಿಸಲಾಗುತ್ತಿತ್ತು. ಈ ಬಾರಿ ಹಬ್ಬದ ಆಚರಣೆಗೆ ಸಿದ್ಧತೆ ನಡೆಯುತ್ತಿರುವಂತೆ ವಿಡಿಯೋ ಮಾಡಲಾಗಿದ್ದು, ಕೊನೆಗೆ ಹ್ಯಾಪಿ ಬಿಗ್ ಬಾಸ್ ಎಂದು ಶುಭ ಕೋರುವ ದೃಶ್ಯವಿದೆ. ನೂರು ದಿನದ ಹಬ್ಬ ಎಂದು ವಿಡಿಯೋದಲ್ಲಿ ಹೇಳಲಾಗಿದ್ದು, ಪ್ರೇಕ್ಷಕರು ಕಾರ್ಯಕ್ರಮ ಹೇಗಿರಬಹುದು ಎಂಬ ಕುತೂಹಲ ಹೊಂದಿದ್ದಾರೆ.
ಕನ್ನಡ ಬಿಗ್ ಬಾಸ್ ಸೀಸನ್ 10:ಪ್ರೋಮೋ ಶೇರ್ ಮಾಡಿರುವ ಸುದೀಪ್, 'ಬಿಗ್ ಬಾಸ್ ಸೀಸನ್ 10' ಶೀಘ್ರದಲ್ಲೇ ಎಂದು ಬರೆದುಕೊಂಡಿದ್ದಾರೆ. ಕಲರ್ಸ್ ಕನ್ನಡ ಈ ವಿಡಿಯೋ ಹಂಚಿಕೊಂಡು, ಊರ ಹಬ್ಬಕ್ಕೆ ಇಲ್ಲಿದೆ ರೀಸನ್, ಶುರುವಾಗ್ತಿದೆ ಹ್ಯಾಪಿ 'ಬಿಗ್ ಬಾಸ್ ಕನ್ನಡ' ಹತ್ತನೇ ಸೀಸನ್ ಎಂದು ಬರೆದುಕೊಂಡಿದ್ದಾರೆ. ಈ ಹಿಂದಿನ ಸೀಸನ್ಗಳಿಗೆ ಹೋಲಿಸಿದರೆ, ಈ ಬಾರಿ ಹಲವು ವಿಶೇಷತೆಗಳು ಮತ್ತು ಬದಲಾವಣೆಗಳು ಇರಲಿದೆ ಎಂದು ನಂಬಲಾಗಿದೆ.