ಹಿಂದಿ ಚಿತ್ರರಂಗದಲ್ಲಿ ನಟ ಅರ್ಜುನ್ ಕಪೂರ್ ಉತ್ತಮ ಅಭಿನಯದ ಮೂಲಕ ತಮ್ಮದೇ ಛಾಪು ಮೂಡಿಸಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನಟಿ, ನಿರ್ಮಾಪಕಿಯಾಗಿ ಮಲೈಕಾ ಅರೋರಾ ಗುರುತಿಸಿಕೊಂಡಿದ್ದು, ಈ ತಾರಾ ಜೋಡಿ ಸದ್ಯದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದಾ ಸುದ್ದಿಯಲ್ಲಿರುವ ಈ ತಾರಾ ಜೋಡಿ ಸಖತ್ ಡ್ಯಾನ್ಸ್ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
ನಿನ್ನೆ ರಾತ್ರಿ ದಿಲ್ ಸೆ ಚಿತ್ರದ ಮಲೈಕಾ ಅವರ ಹಿಟ್ ಸಾಂಗ್ ಚೈಯ ಚೈಯಾ ಸಾಂಗ್ಗೆ ಈ ಜೋಡಿ ನೃತ್ಯ ಮಾಡಿದ್ದಾರೆ. ಇದು ಮುಂಬೈನಲ್ಲಿ ನಡೆದ ಫ್ಯಾಶನ್ ಡಿಸೈನರ್ ಕುನಾಲ್ ರಾವಲ್ ಅವರ ಮದುವೆ ಪಾರ್ಟಿಯಲ್ಲಿ ಮಾಡಿರುವ ನೃತ್ಯದ ವಿಡಿಯೋ ಎನ್ನಲಾಗಿದೆ. ಕುನಾಲ್ ಅವರ ಆಪ್ತ ಸ್ನೇಹಿತ ಅರ್ಜುನ್ ಅವರನ್ನು ಮಲೈಕಾ ಜೊತೆ ಪಾರ್ಟಿಗೆ ಆಹ್ವಾನಿಸಲಾಗಿತ್ತು ಎನ್ನುವ ಮಾಹಿತಿಯಿದೆ.
ಈ ಬ್ಯೂಟಿಫುಲ್ ವಿಡಿಯೋ ಈಗ ಸಖತ್ ವೈರಲ್ ಆಗಿ ಅಭಿಮಾನಿಗಳ ಮೊಗದಲ್ಲಿ ನಗು ತರಿಸಿದೆ. ಅರ್ಜುನ್ ಮಲೈಕಾ ಒಬ್ಬರಿಗೊಬ್ಬರು ಕೈ ಕೈ ಹಿಡಿದು ಮನಸ್ಪೂರ್ವಕವಾಗಿ ಡ್ಯಾನ್ಸ್ ಮಾಡಿರೋದು ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ:ಕಾರ್ತಿಕ್ ಆರ್ಯನ್-ಕಿಯಾರಾ ಅಡ್ವಾಣಿ ನಟನೆಯ ಸತ್ಯಪ್ರೇಮ್ ಕಿ ಕಥಾ ಬಿಡುಗಡೆಗೆ ಮುಹೂರ್ತ
ಇನ್ನೂ ನಿರ್ಮಾಪಕ ಕರಣ್ ನಡೆಸಿಕೊಡುವ ಕಾಫಿ ವಿತ್ ಕರಣ್ ಸೀಸನ್ 7 ಚಾಟ್ ಶೋನಲ್ಲಿ ಭಾಗಿಯಾಗಿದ್ದ ವೇಳೆ ಮಲೈಕಾ ಅರೋರಾ ಅವರೊಂದಿಗಿನ ಪ್ರೇಮದ ಬಗ್ಗೆ ನಟ ಅರ್ಜುನ್ ಕಪೂರ್ ಅವರಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜುನ್, ನಾನು ಅವಿಭಕ್ತ ಕುಟುಂಬದಲ್ಲಿ ಬೆಳೆದಿದ್ದೇನೆ. ಏನಾಗುತ್ತಿದೆ, ಮುಂದೆ ಏನಾಗಲಿದೆ ಎಂಬುದನ್ನು ನೋಡುವುದು ಅಷ್ಟು ಸುಲಭವಲ್ಲ. ನಾನು ಅವರ(ಮಲೈಕಾ) ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ. ನಾನು ಯಾವಾಗಲೂ ಎಲ್ಲರ ಬಗ್ಗೆ ಮೊದಲು ಯೋಚಿಸುತ್ತೇನೆ. ಅವರೊಂದಿಗೆ(ಮಲೈಕಾ) ಇರುವುದು ನನ್ನ ಆಯ್ಕೆ. ಆದರೆ ಎಲ್ಲರೂ ಅರ್ಥಮಾಡಿಕೊಳ್ಳಬೇಕೆಂದು ನಾನು ನಿರೀಕ್ಷಿಸುವುದಿಲ್ಲ. ಎಲ್ಲರೂ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂದು ನನಗನಿಸುವುದಿಲ್ಲ. ಅವರಿಗೆ ಒಬ್ಬ ಮಗನಿದ್ದಾನೆ. ಎಲ್ಲದಕ್ಕೂ ಸಮಯ ಕೊಡಬೇಕಾಗುತ್ತದೆ ಎಂದು ತೂಕದ ಮಾತುಗಳನ್ನಾಡಿದರು.
ಒಟ್ಟಾರೆ ಬಹುದಿನಗಳಿಂದ ಈ ಜೋಡಿಯ ಮದುವೆ ಬಗ್ಗೆ ಚರ್ಚೆ ಆಗುತ್ತಲೇ ಇದೆ. ಎಲ್ಲದಕ್ಕೂ ಸೂಕ್ತ ಸಮಯ ಕೂಡಿ ಬರಬೇಕಿದೆ. ಅಭಿಮಾನಿಗಳು ಶುಭ ಸುದ್ದಿಗೆ ಮತ್ತಷ್ಟು ಕಾಯಬೇಕಿದೆ.