ದಕ್ಷಿಣ ಚಿತ್ರರಂಗದ ಮುಂದಿನ ಬಹು ನಿರೀಕ್ಷಿತ ಸಿನಿಮಾ 'ಪುಷ್ಪ 2'. ಬ್ಲಾಕ್ಬಸ್ಟರ್ ಸಿನಿಮಾ 'ಪುಷ್ಪ: ದಿ ರೈಸ್' ಸಿನಿಮಾದ ಸೀಕ್ವೆಲ್ 'ಪುಷ್ಪ: ದಿ ರೂಲ್' ನಲ್ಲಿ ಬ್ಯುಸಿಯಾಗಿರುವ ಟಾಲಿವುಡ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್, ದಕ್ಷಿಣ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಮತ್ತು ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ಕೆಲಸ ಮಾಡುವ ಬಗ್ಗೆ ಸುಳಿವು ನೀಡಿದ್ದಾರೆ. ಪುಷ್ಪ ಸಿನಿಮಾ ನಟ ಶುಕ್ರವಾರದಂದು ಮುಂಬೈನಲ್ಲಿ ಸೂಪರ್ ಹಿಟ್ ಜವಾನ್ ಸಿನಿಮಾದ ನಿರ್ದೇಶಕರನ್ನು ಭೇಟಿಯಾಗಿದ್ದಾರೆಂದು ವರದಿಗಳು ತಿಳಿಸಿವೆ. ಇಬ್ಬರೂ ಹೊಸ ಸಿನಿಮಾಗಾಗಿ ವಿವಿಧ ವಿಚಾರಗಳನ್ನು ಚರ್ಚಿಸಿದ್ದಾರೆ.
ಮೂಲಗಳ ಪ್ರಕಾರ, ನಟ ಅಲ್ಲು ಅರ್ಜುನ್ ಇತ್ತೀಚೆಗೆ ಮುಂಬೈನಲ್ಲಿ ಅಟ್ಲೀ ಅವರನ್ನು ಭೇಟಿಯಾಗಿದ್ದಾರೆ. ಈ ಮೀಟ್ ಸಾಕಷ್ಟು ಕುತೂಹಲಕಾರಿಯಾಗಿದೆ ಎಂದು ವರದಿಗಳು ಹೇಳಿವೆ. ಇಬ್ಬರೂ ಸಂಭವನೀಯ ಸಹಯೋಗದ ಕುರಿತು ಬಹಳ ಉತ್ಸುಕರಾಗಿದ್ದಾರೆ. ಚರ್ಚೆ ಇನ್ನೂ ಆರಂಭಿಕ ಹಂತದಲ್ಲಿದೆಯಾದರೂ, ಹೈ ಬಜೆಟ್ ಚಿತ್ರ ಬಹಳ ಚೆನ್ನಾಗಿ ಮೂಡಿ ಬರಲಿದೆ ಎಂದು ಮೂಲಗಳು ತಿಳಿಸಿವೆ.
ಜವಾನ್‌ನ ಯಶಸ್ಸಿನಲೆಯಲ್ಲಿ ತೇಲುತ್ತಿರುವ ಸೌತ್ ಸಿನಿಮಾ ಇಂಡಸ್ಟ್ರಿಯ ಸ್ಟಾರ್ ಡೈರೆಕ್ಟರ್ ಅಟ್ಲೀ ಆ್ಯಕ್ಷನ್ ಕಟ್ ಹೇಳಲಿರುವ ಮುಂದಿನ ಸಿನಿಮಾ ಕುರಿತು ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವಿದೆ. ಜವಾನ್ ಮೂಲಕ ಬಹು ಬೇಡಿಕೆ ನಿರ್ದೇಶಕರಾಗಿ ಅಟ್ಲೀ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಹೀಗಿರುವಾಗ, ಬಹುಬೇಡಿಕೆ ನಟ ಅಲ್ಲು ಅರ್ಜುನ್ ಅವರಿಗಾಗಿ ಯಾವ ರೀತಿಯ ಸ್ಕ್ರಿಪ್ಟ್ ರೆಡಿ ಮಾಡಲಿದ್ದಾರೆ, ನಟನ ಪ್ರತಿಭೆಯನ್ನು ಚಿತ್ರದಲ್ಲಿ ಹೇಗೆ ತೋರಿಸಲಿದ್ದಾರೆ ಎಂಬುದೀಗ ಕುತೂಹಲಕಾರಿ ವಿಷಯವಾಗಿದೆ. ಸ್ಟಾರ್ ನಟ-ನಿರ್ದೇಶಕ ಜೋಡಿ ಸೇರಿ ಸಿನಿಮಾ ಮಾಡಿದ್ರೆ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಪಕ್ಕಾ. ಏಕೆಂದರೆ, ಅಟ್ಲೀ ಅದ್ಭುತ ಕಥೆಗಾರ, ನಿರ್ದೇಶಕ. ಅಲ್ಲು ಅರ್ಜುನ್ ಆಕರ್ಷಕ ಅಭಿನಯಕ್ಕೆ ಹೆಸರುವಾಸಿ ಎಂಬುದು ನಿಮಗೆ ತಿಳಿದೇ ಇದೆ.