ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಕೆಲವು ಗಂಟೆಗಳ ಹಿಂದಿನ ಪೋಸ್ಟ್ ಭಾರಿ ಗೊಂದಲಕ್ಕೀಡು ಮಾಡಿತ್ತು. 'ನಾವು ಬೇರ್ಪಟ್ಟಿದ್ದೇವೆ. ಈ ಕಷ್ಟದ ಅವಧಿಯಲ್ಲಿ ನಮಗೆ ಸಮಯವನ್ನು ನೀಡುವಂತೆ ವಿನಂತಿಸುತ್ತೇವೆ' ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದರು. ಈ ಬರಹ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೇ, ರಾಜ್ ಕುಂದ್ರಾ ಪತ್ನಿ ಶಿಲ್ಪಾ ಶೆಟ್ಟಿಗೆ ವಿಚ್ಛೇದನ ನೀಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಇದೀಗ ಈ ಎಲ್ಲಾ ಗೊಂದಲಗಳಿಗೆ ರಾಜ್ ಕುಂದ್ರಾ ಮತ್ತೊಂದು ಪೋಸ್ಟ್ ಹಂಚಿಕೊಳ್ಳುವ ಮೂಲಕ ಉತ್ತರ ನೀಡಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಕಂಪ್ಲೀಟ್ ಫೇಸ್ ಮಾಸ್ಕ್ ಧರಿಸಿ ಓಡಾಡುತ್ತಿದ್ದ ಉದ್ಯಮಿ ರಾಜ್ ಕುಂದ್ರಾ ಇದೀಗ ಮಾಸ್ಕ್ ಇಲ್ಲದೇ ಸಾರ್ವಜನಿಕರಿಗೆ ದರ್ಶನ ಕೊಟ್ಟಿದ್ದಾರೆ. ಇದೇ ಕುರಿತಾಗಿ ಅವರು 'ಬೇರ್ಪಟ್ಟಿದ್ದೇವೆ' ಎಂದು ಹೇಳಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. "ಮಾಸ್ಕ್ಗೆ ವಿದಾಯ.. ಈಗ ಬೇರ್ಪಡುವ ಸಮಯ! ಕಳೆದ ಎರಡು ವರ್ಷಗಳಿಂದ ನನ್ನನ್ನು ರಕ್ಷಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಪ್ರಯಾಣ ಮುಂದಿನ ಹಂತಕ್ಕೆ" ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ. ಈ ಮೂಲಕ ತಾವು ಬೇರ್ಪಡುತ್ತಿರುವುದು ಶಿಲ್ಪಾ ಶೆಟ್ಟಿ ಅವರಿಂದಲ್ಲ, ಬದಲಾಗಿ ಫೇಸ್ ಮಾಸ್ಕ್ನಿಂದ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಫೇಸ್ ಮಾಸ್ಕ್ಗೆ ಗುಡ್ ಬೈ: ಸಾರ್ವಜನಿಕರಿಗೆ ದರ್ಶನ ಕೊಟ್ಟ ರಾಜ್ ಕುಂದ್ರಾ.. ಶಿಲ್ಪಾ ಶೆಟ್ಟಿ ಪತಿಯ ವಿಡಿಯೋ ವೈರಲ್
'ಬೇರ್ಪಡುವ' ಪೋಸ್ಟ್ ಹಂಚಿಕೊಳ್ಳುತ್ತಿದ್ದಂತೆ, ರಾಜ್ ಕುಂದ್ರಾ ತಮ್ಮ ಫೇಸ್ ಮಾಸ್ಕ್ನಿಂದ 'ಬೇರ್ಪಟ್ಟಿದ್ದಾರೆ' ಹೊರತು 'ಶಿಲ್ಪಾ' ಅವರಿಂದಲ್ಲ ಎಂದು ಕೆಲವರು ಎಕ್ಸ್ನಲ್ಲಿ ರಾಜ್ ಕುಂದ್ರಾ ಪೋಸ್ಟ್ಗೆ ಕಾಮೆಂಟ್ ಮಾಡಿದ್ದರು. ಅದು ನಿಜವಾಗಿದೆ. ಇನ್ನೂ ಪತ್ನಿ ಶಿಲ್ಪಾ ಶೆಟ್ಟಿ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಹೀಗಾಗಿ ವಿಚ್ಛೇದನ ಅಲ್ಲ ಎಂದು ನೆಟ್ಟಿಗರು ಊಹಿಸಿದ್ದರು.
ಜೈಲುವಾಸದ ಅನುಭವ 'UT 69': 'UT 69' 2023ರ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. 2021ರ ಜುಲೈನಲ್ಲಿ ಅಶ್ಲೀಲ ಚಿತ್ರ ನಿರ್ಮಾಣ ಮತ್ತು ವಿತರಣೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ರಾಜ್ ಕುಂದ್ರಾ ಅವರು ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿ ಸರಿಸುಮಾರು ಎರಡು ತಿಂಗಳಿದ್ದರು. ಕಾನೂನು ಹೋರಾಟ ಎದುರಿಸಿದ ಬಳಿಕ, ರಾಜ್ ಅವರಿಗೆ ಜಾಮೀನು ಸಿಕ್ಕಿತು. ಅದಾಗ್ಯೂ, ರಾಜ್ ಅವರು ತಮ್ಮ ತಪ್ಪಿಲ್ಲದಿದ್ದರೂ ಈ ಪ್ರಕರಣದಲ್ಲಿ ಸಿಲುಕಿಕೊಂಡಿರುವುದಾಗಿ ಹೇಳಿಕೊಂಡು ಬಂದಿದ್ದಾರೆ.
ಅವರ ಕಾನೂನು ಹೋರಾಟದ ಅನುಭವಗಳ ಮೇಲೆಯೇ 'ಯುಟಿ69' ಚಿತ್ರ ನಿರ್ಮಾಣಗೊಂಡಿದೆ. 'UT 69'ರ ಟ್ರೇಲರ್ ಅಕ್ಟೋಬರ್ 18 ರಂದು ಅನಾವರಣಗೊಂಡಿದೆ. ಚಿತ್ರದಲ್ಲಿ ರಾಜ್ ಕುಂದ್ರಾ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾ ಅವರ ಕಾನೂನು ಹೋರಾಟ, ಜೈಲುವಾಸದ ಅನುಭವಗಳ ಸುತ್ತ ಕೇಂದ್ರೀಕೃತವಾಗಿದೆ. ನವೆಂಬರ್ 3 ರಂದು ಚಿತ್ರಮಂದಿರಗಳಲ್ಲಿ 'ಯುಟಿ 69' ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಶಿಲ್ಪಾ ಶೆಟ್ಟಿ - ರಾಜ್ ಕುಂದ್ರಾ ನಡುವೆ ಬಿರುಕು ವದಂತಿ: ಸಿನಿಮಾ ಪ್ರಚಾರದ ಭಾಗವಾಗಿ ಟ್ವೀಟ್ ಮಾಡಿದ್ರಾ ಉದ್ಯಮಿ?!