ಸೌತ್ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ಬೆಡಗಿ ಕೃತಿ ಸನೋನ್ ನಟನೆಯ 'ಆದಿಪುರುಷ್' ಬಾಕ್ಸ್ ಆಫೀಸ್ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡಿದೆ. ಕೆಲ ಸರಿಪಡಿಸುವಿಕೆಯ ಹೊರತಾಗಿಯೂ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಸೋತಿದೆ. ಸಿನಿಮಾ ತೆರೆಕಂಡ 8ನೇ ದಿನವೂ ಅತ್ಯಂತ ಕಡಿಮೆ ವ್ಯವಹಾರ ನಡೆಸಿದೆ. ಚಿತ್ರದ ಆರಂಭಿಕ ದಿನ ಮತ್ತು ಮೊದಲ ವಾರಾಂತ್ಯದಲ್ಲಿ ಎಲ್ಲರ ಹುಬ್ಬೇರಿಸಿದ ಸಿನಿಮಾ ನಾಲ್ಕನೇ ದಿನ ಕುಸಿತ ಕಾಣಲು ಪ್ರಾರಂಭಿಸಿತು. ಚಿತ್ರಮಂದಿರಗಳಲ್ಲಿ ಕಳಪೆ ಪ್ರದರ್ಶನ ಮುಂದುವರಿದಿದೆ. ಓಂ ರಾವುತ್ ನಿರ್ದೇಶಿಸಿದ ಪೌರಾಣಿಕ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಸಾಮಾಜಿಕ ಜಾಲತಾಣಲದಲ್ಲಿ ವ್ಯಕ್ತವಾದ ನೆಗೆಟಿವ್ ಟಾಕ್ ಕೆಲಕ್ಷನ್ ಕುಸಿತಕ್ಕೆ ಕಾರಣ.
ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಟಿ-ಸೀರಿಸ್ ಸಂಸ್ಥೆಯಿಂದ ನಿರ್ಮಾಣಗೊಂಡ ಆದಿಪುರುಷ್ ಸಿನಿಮಾದ 8ನೇ ದಿನದ ಗಳಿಕೆ ಅತ್ಯಂತ ಕಡಿಮೆ ಸಂಖ್ಯೆ ದಾಖಲಿಸಿದೆ. Sacnilk.com ಪ್ರಕಾರ, ಆದಿಪುರುಷ್ ಎಲ್ಲ ಭಾಷೆಗಳೂ ಸೇರಿದಂತೆ ಭಾರತದಲ್ಲಿ 3.25 ಕೋಟಿ ರೂ. (nett collection) ಸಂಗ್ರಹಿಸಿದೆ. ಎಂಟು ದಿನಗಳ ಅಂತ್ಯಕ್ಕೆ ಒಟ್ಟು ದೇಶೀಯ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಸುಮಾರು 263.15 ಕೋಟಿ ರೂ. ಪ್ರೇಕ್ಷಕರ ಕೊರತೆ ಹಿನ್ನೆಲೆ ಅನೇಕ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ವರದಿಗಳು ಹೇಳಿವೆ.
ಓಂ ರಾವುತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಆದಿಪುರುಷ್ ಚಿತ್ರದಲ್ಲಿ ಶ್ರೀರಾಮನ ಪಾತ್ರದಲ್ಲಿ ಸೌತ್ ನಟ ಪ್ರಭಾಸ್, ಸೀತೆ ಪಾತ್ರದಲ್ಲಿ ಬಾಲಿವುಡ್ ನಟಿ ಕೃತಿ ಸನೋನ್, ಲಕ್ಷ್ಮಣನ ಪಾತ್ರದಲ್ಲಿ ಸನ್ನಿ ಸಿಂಗ್, ಹನುಮಂತನ ಪಾತ್ರದಲ್ಲಿ ದೇವದತ್ತ ಮತ್ತು ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಟಿ ಸೀರಿಸ್ ಸಂಸ್ಥೆಯಿಂದ ಸುಮಾರು 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡ 'ಆದಿಪುರುಷ್' ಜೂನ್ 16 ರಂದು ಹಿಂದಿ, ತೆಲುಗು, ಕನ್ನಡ, ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ದೇಶ ಮಾತ್ರವಲ್ಲದೇ ವಿಶ್ವದೆಲ್ಲೆಡೆ ತೆರೆಕಂಡಿದೆ. ಬಿಡುಗಡೆ ಆದ ಕೇವಲ ಮೂರು ದಿನಗಳಲ್ಲಿ 340 ಕೋಟಿ ರೂ. ಗಳಿಸಿದ ಈ ಸಿನಿಮಾ ಏಕಾಏಕಿ ತೀವ್ರ ಕುಸಿತ ಕಂಡಿತು. ಸಾಮಾಜಿಕ ಜಾಲತಾಣದಲ್ಲಿ ನಕಾರಾತ್ಮಕ ಬಾಯಿ ಮಾತುಗಳು ಕಾಡ್ಗಿಚ್ಚಿನಂತೆ ಹರಡಿತು. ಸದ್ಯ ಹಾಕಿದ ಬಂಡವಾಳವೂ ವಾಪಸ್ ಬರೋದು ಡೌಟ್ ಅಂತಾರೆ ಸಿನಿ ಪಂಡಿತರು.