ಅಕೋಲಾ (ಮಹಾರಾಷ್ಟ್ರ):ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮಹಾರಾಷ್ಟ್ರದ ಅಕೋಲಾದ ಪತೂರ್‌ನಿಂದ ಇಂದು ಬೆಳಗ್ಗೆ 6 ಗಂಟೆಗೆ 'ಭಾರತ್ ಜೋಡೋ ಯಾತ್ರೆ' ಪುನರಾರಂಭಿಸಿದರು. ಈ ಯಾತ್ರೆಯಲ್ಲಿ ನಟಿ ರಿಯಾ ಸೇನ್ ರಾಹುಲ್ ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದರು.
ಮಹಾರಾಷ್ಟ್ರ ರಾಜ್ಯದಲ್ಲಿ 11ನೇ ದಿನದ ಭಾರತ್ ಜೋಡೋ ಯಾತ್ರೆ ಸಾಗುತ್ತಿದ್ದು, ವಾಲೇಗಾಂವ್ ಮೂಲಕ ಯಾತ್ರೆ ಬಾಗ್ ಫಾಟಾ ತಲುಪಲಿದೆ. ಬಾಳಾಪುರ ತಾಲೂಕಿನ ಬಾಗ್ ಫಾಟಾದಲ್ಲಿ ಇಂದಿನ ಪಾದಯಾತ್ರೆ ಕೊನೆಗೊಳ್ಳಲಿದ್ದು, ಅಲ್ಲೇ ರಾಹುಲ್ ಗಾಂಧಿ ಹೆಜ್ಜೆ ಹಾಕಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ನಾಳೆ ಬೆಳಿಗ್ಗೆ 8:30ಕ್ಕೆ ಯಾತ್ರೆ ಬುಲ್ಧಾನ ಜಿಲ್ಲೆಯನ್ನು ಪ್ರವೇಶಿಸಲಿದೆ. ಸಂಜೆ ಐದು ಗಂಟೆಗೆ ಶೇಗಾಂವ್‌ನಲ್ಲಿ ಸಭೆ ನಡೆಯಲಿದೆ. ಈ ಸಭೆಯ ಸ್ಥಳದ ಸಿದ್ಧತೆಗಳು ಅಂತಿಮ ಹಂತದಲ್ಲಿದ್ದು, ಅಮರಾವತಿ ವಿಭಾಗದ ಉಪ ಪೊಲೀಸ್ ಮಹಾನಿರೀಕ್ಷಕ ಚಂದ್ರಕಿಶೋರ್ ಮೀನಾ ಅವರು ಇತರ ಪೊಲೀಸ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದರು. ಭದ್ರತೆ ದೃಷ್ಟಿಯಿಂದ ಪೊಲೀಸ್ ಆಡಳಿತ ಸಾಕಷ್ಟು ಮುಂಜಾಗ್ರತೆ ವಹಿಸಿದೆ. ರಾಹುಲ್ ಗಾಂಧಿ ಅವರು ಬುಲ್ಧಾನ ಜಿಲ್ಲೆ ಪ್ರವೇಶಿಸಿದ ಬಳಿಕ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಲಿದ್ದಾರೆ.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ: ಮಹಾರಾಷ್ಟ್ರದ ಅಕೋಲಾದಿಂದ ಪುನರಾರಂಭ
ಈ ಹಿಂದೆ ಭಾರತ್ ಜೋಡೋ ಯಾತ್ರೆಯಲ್ಲಿ ಹಲವು ನಟ-ನಟಿಯರು ಭಾಗವಹಿಸಿದ್ದರು. ಇಂದು ಭಾರತ್ ಜೋಡೋ ಯಾತ್ರೆಯಲ್ಲಿ ರಿಯಾ ಸೇನ್ ಭಾಗವಹಿಸಿದ ನಂತರ, ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.