'ಮರಿ ಟೈಗರ್' ಎಂದೇ ಫೇಮಸ್ ಆಗಿರುವ ವಿನೋದ್ ಪ್ರಭಾಕರ್ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ನಟ. 'ಲಂಕಾಸುರ' ಸಿನಿಮಾ ಗುಂಗಿನಲ್ಲಿರುವ ಅವರು 'ಫೈಟರ್' ಆಗಿ ಬೆಳ್ಳಿ ತೆರೆಯಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಚಿತ್ರರಂಗದಲ್ಲಿ ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿ ಸಿನಿ ಪ್ರೇಮಿಗಳ ಹೃದಯ ಕದ್ದಿರುವ ವಿನೋದ್ ಪ್ರಭಾಕರ್ ಸದ್ಯ ತಮ್ಮ ಹೊಸ ಚಿತ್ರ 'ಫೈಟರ್' ಜಪ ಮಾಡುತ್ತಿದ್ದಾರೆ. ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿರುವ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.
ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಿರ್ದೇಶಕ ನೂತನ್ ಉಮೇಶ್, "ಈ ಚಿತ್ರದ ಶೀರ್ಷಿಕೆಯನ್ನು ವಿನೋದ್ ಪ್ರಭಾಕರ್ ಅವರ ಅಭಿಮಾನಿಗಳೇ ಅನಾವರಣ ಮಾಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಹೂರ್ತಕ್ಕೆ ಆಗಮಿಸಿ ಚಿತ್ರಕ್ಕೆ ಚಾಲನೆ ನೀಡಿದ್ದರು. ಈಗ ಟೀಸರನ್ನು ನಿರ್ಮಾಪಕರ ತಂದೆ ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲೇ ಹಾಡುಗಳು ಹಾಗೂ ಟ್ರೇಲರ್ ಹೊರಬರಲಿದೆ" ಎಂದು ತಿಳಿಸಿದರು.
"ಫೈಟರ್ ಎಂದರೆ ಹೊಡೆದಾಡುವವನು ಎಂದು ತಿಳಿದುಕೊಳ್ಳುತ್ತಾರೆ. ಆದರೆ ನಮ್ಮ ಫೈಟರ್ ಅನ್ಯಾಯದ ವಿರುದ್ಧ ಹಾಗೂ ತನ್ನ ಕುಟುಂಬಕ್ಕಾಗಿ ಹೋರಾಡುವವನು. ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಸೋಮಶೇಖರ್ ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಗುರುಕಿರಣ್ ಸಂಗೀತ ನೀಡಿದ್ದಾರೆ. ಪಾವನ ಹಾಗೂ ಲೇಖಾ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ. ಸುಮಾರು ವರ್ಷಗಳ ನಂತರ ನಟಿ ನಿರೋಷ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ" ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.