'ಫಿಸಿಕ್ಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಯುವ ನಟ ಸುಮುಖ. ಈ ಚಿತ್ರದ ಬಳಿಕ 'ರಾಜಸ್ಥಾನ್ ಡೈರಿಸ್' ಎಂಬ ಮರಾಠಿ ಚಿತ್ರದಲ್ಲಿ ಅಭಿನಯಿಸುತ್ತಿರುವ ಇವರು ಸದ್ಯ ಹಿಮಾಲಯ ಪ್ರವಾಸ ಕೈಗೊಂಡಿದ್ದಾರೆ. ಈ ಮಧ್ಯೆ ಸುಮುಖ ಹಿಮಾಲಯದ ತಪ್ಪಲಿನಲ್ಲಿ ಸಂಚರಿಸುವಾಗ ಅಪ್ಪು ನಗುವಿನ ದರ್ಶನವಾಗಿದೆ.
ಎವರೆಸ್ಟ್ ಬೇಸ್ ಕ್ಯಾಂಪ್ನಲ್ಲಿ ಸಮುದ್ರ ಮಟ್ಟದಿಂದ 5364 ಮೀಟರ್ ಎತ್ತರದಲ್ಲಿ ಮಂಜು ಮುಸುಕಿದ ಎತ್ತರೆತ್ತರದ ಶಿಖರಗಳ ನಡುವೆ ಸಂಚರಿಸುವಾಗ ಪವಿತ್ರವಾದ ಹಳದಿ ವಸ್ತ್ರದಿಂದ ಸುತ್ತಲ್ಪಟ್ಟ, ಕೋಟ್ಯಾಂತರ ಜನರ ಹೃದಯ ಗೆದ್ದಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಸ್ನಿಗ್ದ ನಗುವಿರುವ ಫೋಟೊ ಸಿಕ್ಕಿದೆ.
'ಅವರ ನಗು ಮನಸ್ಸನ್ನು ನಿರಾಳಗೊಳಿಸಿತು..' "ಕಾಗದದ ದೋಣಿಯಲಿ ಚಿತ್ರದ ಎರಡನೇ ಶೆಡ್ಯುಲ್ ಆರಂಭವಾಗುವ ಮೊದಲು ನಾನು ಕೆಲವು ಕಾಲ ಪ್ರಕೃತಿಯ ನಡುವೆ ಕಳೆಯಲು ನಿರ್ಧರಿಸಿದ್ದೆ. ನೇಪಾಳದ ಲುಕ್ಲಾದಿಂದ ಎವರೆಸ್ಟ್ ಬೇಸ್ ಕ್ಯಾಂಪ್‌ಗೆ ಹತ್ತು ದಿನದ ಚಾರಣದ ಕಾರ್ಯಕ್ರಮ ಅದಾಗಿತ್ತು. ಕರ್ನಾಟಕದಿಂದ ನಾನು ಒಬ್ಬನೇ ಹೋಗಿದ್ದು. ಅಲ್ಲಿ ಹಿಮದ ರಾಶಿಯ ನಡುವೆ ಅಪ್ಪುವಿನ ಫೋಟೋ ನೋಡಿದಾಗ ಮೊದಲು ನನಗೆ ಅಚ್ಚರಿ ಆಯ್ತು.
ನಿಧಾನವಾಗಿ ಅವರ ಜನಪ್ರಿಯತೆ ಅವರ ಮೇಲಿನ ಗೌರವ ಹಾಗೂ ಆಧರದ ಪ್ರಮಾಣ ಎಷ್ಟಿರಬಹುದು ಎಂದು ಮನಸಿನ ಆಳಕ್ಕೆ ಇಳಿಯಿತು. ಕನ್ನಡದ ನೆಲೆಯಿಂದ ದೂರ ಇರುವಾಗ, ನನ್ನನ್ನು ನಾನು ಆ ಅಗಾಧ ಪ್ರಕೃತಿಯ ನಡುವೆ ಅರ್ಥ ಮಾಡಿಕೊಳ್ಳುವ ಪ್ರಯತ್ನದಲ್ಲಿರುವಾಗ ಎಲ್ಲರಿಗೂ ಪ್ರೇರಣೆಯಾಗಿರುವ ಅವರ ನಗು ನನ್ನ ಮನಸ್ಸನ್ನ ನಿರಾಳಗೊಳಿಸಿತು. ತುಂಬಾ ವರ್ಷಗಳಿಂದ ನಮಗೆ ಗೊತ್ತಿರೋರು ದೂರದ ದೇಶದಲ್ಲಿ ಎದುರಾದಾಗ ಆಗುತ್ತಲ್ಲ ಆ ಖುಷಿ ಅದು" ಎಂದು ಅಪ್ಪು ಕಂಡಾಗ ತಮಗಾದ ಸಂತಸವನ್ನು ನಟ ಸುಮುಖ ಹಂಚಿಕೊಂಡರು.